ಕೂಗು ನಿಮ್ಮದು ಧ್ವನಿ ನಮ್ಮದು

ಶಿವಮೊಗ್ಗ ನಗರಕ್ಕೆ ಬಿಜೆಪಿ ಅಭ್ಯರ್ಥಿ ಯಾರು? ಕುತೂಹಲ ಹೆಚ್ಚಿಸಿದೆ ಹೈ ಕಮಾಂಡ್ ತಂತ್ರಗಾರಿಕೆ

ಶಿವಮೊಗ್ಗ: ಕೆಎಸ್ ಈಶ್ವರಪ್ಪ ಚುನಾವಣಾ ರಾಜಕಾರಣಿಂದ ಅಚ್ಛರಿಯಿಂದ ಹಿಂದೆ ಸರಿದಿದ್ದಾರೆ. ಹೈಕಮಾಂಡ್ ನಾಯಕರೇ ಈ ನಿರ್ಧಾರದ ಹಿಂದೆ ಇದ್ದಾರೆಂಬುದು ಗುಟ್ಟಾಗಿಯೇನೂ ಉಳಿದಿಲ್ಲ. ಈ ಮಾತುಗಳನ್ನ ಈಶ್ವರಪ್ಪ ಪ್ರತ್ಯಕ್ಷವಾಗಿ ಹೇಳದಿದ್ದರೂ ಸಹ ಮಂಗಳವಾರ ಜನರ ಜೊತೆ ಮಾತನಾಡುವಾಗ ಆಗಾಗ ಸುಳಿಯುತ್ತಿತ್ತು.

ಸೋಮವಾರ ಸಂಜೆಯವರೆಗೂ ಹುರುಪಿನಿಂದಲೇ ಕ್ಷೇತ್ರ ಸಂಚಾರ ಮಾಡಿ ಚುನಾವಣೆಗೆ ಸಿದ್ಧತೆ ನಡೆಸಿಕೊಂಡಿದ್ದ ಈಶ್ವರಪ್ಪ ಏಕಾಏಕಿ ಜೆಪಿ ನಡ್ಡಾಗೆ ಪತ್ರ ಬರೆದು ತಾನು ಚುನಾವಣೆಗೆ ನಿಲ್ಲೋದಿಲ್ಲ, ಪಕ್ಷ ಸಂಘಟನೆ ಮಾಡಿಕೊಂಡು ಇದ್ದು ಬಿಡ್ತೀನಿ ಎಂದಿರುವುದು ಅವರ ಅಭಿಮಾನಿಗಳಿಗೆ ಆಘಾತ ತಂದಿದೆ. ಇದರ ಬೆನ್ನಲ್ಲೆ ಕಳೆದ ರಾತ್ರಿ ಬಿಜೆಪಿ ಮೊದಲ ಪಟ್ಟಿ ರಿಲೀಸ್ ಆಗಿದ್ದು ಶಿವಮೊಗ್ಗ ನಗರ ( ಈಶ್ವರಪ್ಪ ಕ್ಷೇತ್ರ) ಹೊರತು ಪಡಿಸಿ ಎಲ್ಲಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ! ಹಾಗಾದರೆ ಶಿವಮೊಗ್ಗ ನಗರಕ್ಕೆ ಯಾರು ಅಭ್ಯರ್ಥಿಯಾಗಬಲ್ಲರು? ಯಾರೆಲ್ಲಾ ಸ್ಪರ್ಧಿಗಳು ಇದ್ದಾರೆ? ಯಾರ ಹೆಸರು ಪರಿಗಣನೆಗೆ ಬಂದಿದೆ ಎಂದರೆ ಮೊದಲ ಹೆಸರು ಡಾ. ಧನಂಜಯ ಸರ್ಜಿ ಟಿಕೆಟ್‌ ಅನೌನ್ಸ್‌ಗೂ ಮೊದಲೇ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ; ಭಾರಿ ಕುತೂಹಲ ಕೆರಳಿಸಿದ ಈಶ್ವರಪ್ಪ ನಡೆ

ಡಾ. ಸರ್ಜಿ ಮೂಲತಃ ಸಂಘದ ಕಾರ್ಯಕರ್ತ, ವಿಕಾಸ ಟ್ರಸ್ಟ್ ಮೂಲಕ ಅನೇಖ ಸಮಾಜಮುಖಿ ಕೆಲಸ ಮಾಡಿದ ನಗರದ ಖ್ಯಾತ ವೈದ್ಯ. ಅವರ ಆಸ್ಪತ್ರೆಗಳೂ ಸಹ ಅಸಂಖ್ಯ ಜನರಿಗೆ ಕೈ ಗೆಟುಕುವ ದರದಲ್ಲಿ ಚಿಕಿತ್ಸೆ ನೀಡಿದೆ. ಇದರ ಜೊತೆ ಸರ್ಜಿ ಫೌಂಡೇಶನ್ ಹೆಸರಲ್ಲಿ ನಾನಾ ಸಮಾಜಮುಖಿ ಕೆಲಸಗಳಿಂದ ನಗರದ ಸ್ವಾಸ್ಥ್ಯ ಕಾಪಾಡಿಕೊಂಡು ಬಂದಿದ್ದಾರೆ.

ನಲವತ್ತೈದರ ಆಸುಪಾಸಿನ ವೈದ್ಯ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿರಬಹುದು ರಾಜ್ಯ ಸರ್ಕಾರದ ಅನುದಾನಗಳಿರಬಹುದು ಜನರಿಗೆ ಮುಟ್ಟಿಸುವಲ್ಲಿ ಚಾಣಾಕ್ಷ. ಮುಂದಿನ ವರ್ಷ ಬರುವ ಸಂಸತ್ ಚುನಾವಣೆಯಲ್ಲಿ ಅವರಿಂದ ಬಿಜೆಪಿ ಕೆಲಸ ನಿರೀಕ್ಷಿಸಬಹುದು. ಶಿವಮೊಗ್ಗದಲ್ಲಿ ಪ್ರಭಾವಿಯಾಗಿರುವ ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಅಲ್ಪಸಂಖ್ಯಾತ ಮತಗಳನ್ನೂ ಬಾಚಬಲ್ಲರೆಂಬುದು ಬಿಜೆಪಿ ನಾಯಕರ ಲೆಕ್ಕಾಚಾರ. ಬಹಳ ಮುಖ್ಯವಾಗಿ ಬಿಎಸ್ ಯಡಿಯೂರಪ್ಪ ಅವರ ಆಪ್ತರೂ ಹೌದು‌‌..!

ಈಶ್ವರಪ್ಪನವರಿಗೆ ತಪ್ಪಿದ ಟಿಕೆಟ್ ಪುತ್ರ ಕೆ.ಈ.ಕಾಂತೇಶ್ ಗೆ ಸಿಗಬಹುದಾ..?
ನೈತಿಕವಾಗಿ ಈಶ್ವರಪ್ಪ ತಮ್ಮ ಪುತ್ರನ ಪರ ಲಾಭಿ ಮಾಡುವುದು ಸರಿ ಇದೆ. ಅವರ ಆಪ್ತರ ಬಳಿ ಯಲ್ಲಿಯೂ ಮಾತನಾಡಿರುವ ಈಶ್ವರಪ್ಪ, ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಬಳಿ ಈ ವಿಷಯ ತರೋದಾಗಿ ಹೇಳಿದ್ದಾರೆ. ಯಡಿಯೂರಪ್ಪ ನಿವೃತ್ತಿ ಹೊಂದಿದ್ದಾರೆ. ಅವರ ಮಕ್ಕಳಿಗೆ ಟಿಕೆಟ್ ಸಿಗೋದಾದರೆ ಈಶ್ವರಪ್ಪ ಮಗ ಕಾಂತೇಶ್ ಗೆ ಟಿಕೆಟ್ ಏಕೆ ಕೊಡಬಾರದು ಎಂಬ ಚರ್ಚೆ ಆರಂಭವಾಗಿದೆ. ಆದರೆ ಕಾಂತೇಶ್ ಅಪ್ಪನಷ್ಟೇ ಸಮರ್ಥನಾಗಿ ಜನ ನಾಯಕ ಆಗ್ತಾರ ಎಂಬ ಅನುಮಾನ ಕಾಡಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂಬುದನ್ನ ಬಿಟ್ಟರೆ ಅದರಾಚೆ ಈ ತನಕ ಹೊರಬಾರದ ಕಾಂತೇಶ್ ಹೆಸರೂ ಕೂಡ ಮುನ್ನೆಲೆಗೆ ಬಂದಿದೆ.

ಇನ್ನು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ.ಹರಿಕೃಷ್ಣ ಹೆಸರು ಮುಂಚೂಣಿಯಲ್ಲಿದೆ. ಮಾಜಿ ಎಂಎಲ್ಸಿ ಎಂ.ಬಿ.ಭಾನುಪ್ರಕಾಶ್ ಅವರ ಪುತ್ರನಾಗಿರುವ ಹರಿಕೃಷ್ಣ ತನ್ನದೇ ಆದ ಶೈಲಿಯಲ್ಲಿ ಯುವಕರನ್ನ ಸಂಘಟಿಸಿದ್ದಾರೆ. ಮತ್ತೂರು ಬ್ರಾಹ್ಮಣ ಕುಟುಂಬದ ಹರಿಕೃಷ್ಣ ಯುವ ಮುಖವಾಗಿದ್ದು ಕಳೆದೆರಡು ವರ್ಷಗಳಿಂದ ತೆರೆಮರೆಯಲ್ಲಿ ಕೆಲಸ ಆರಂಭಿಸಿದ್ದಾರೆ. ಹರಿಕೃಷ್ಣಗೆ ಸಂಘ ಪರಿವಾರದ ನಂಟು ಕುಟುಂಬಸ್ಥರಿಂದಲೇ ಇದೆ. ಹಾಗಾಗಿ ಹರಿಕೃಷ್ಣ ಟಿಕೆಟ್ ಪಡೆಯಬಹುದು ಎಂಬ ನಿರೀಕ್ಷೆ ಇದೆ.

ಚರ್ಚೆಯಲ್ಲಿರುವ ಮತ್ತೊಂದು ಲಿಂಗಾಯತ ಮುಖಂಡನ ಹೆಸರು ಎಸ್. ಜ್ಯೋತಿ ಪ್ರಕಾಶ್‌. ಯಡಿಯೂರಪ್ಪನವರ ಆಪ್ತನಾಗಿರುವ ಇವರು ಯಾವುದೇ ಕಾರ್ಯಕ್ರಮಗಳಿರಲಿ ಯಡಿಯೂರಪ್ಪ ಹಿಂದೆಯೇ ಸುತ್ತುತ್ತಿರುತ್ತಾರೆ. ಹಾಗೂ ಯಡಿಯೂರಪ್ಪ ಸಿಎಂ ಆಗಿದ್ದಾಗ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.

ಇನ್ನುಳಿದಂತೆ ಅನೇಖರು ನಾನಾ ಕಾರಣಗಳಿಂದ ಹೆಸರು ತೇಲಿ ಬಿಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಹೈಕಮಾಂಡ್ ಬತ್ತಳಿಕೆಯಲ್ಲಿ ಯಾವ ಬಾಣವಿದೆ ಎಂಬುದನ್ನ ಊಹೆ ಮಾಡಲು ಸಾಧ್ಯವಿಲ್ಲ. ಗಲಭೆ ಗ್ರಸ್ತ ಶಿವಮೊಗ್ಗ ಸಹಜ ಸ್ಥಿತಿಯಲ್ಲಿದೆ. ಅಭಿವೃದ್ಧಿ, ಸಾಮರಸ್ಯ ಮಂತ್ರ ಪಠಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಣತಿಯಂತೆಯೇ ಶಿವಮೊಗ್ಗ ನಗರದಲ್ಲಿ ಮನ್ವಂತರ ಆರಂಭವಾಗಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

error: Content is protected !!