ಉಡುಪಿ: ಸಾಮಾನ್ಯ ಕಾರ್ಯಕರ್ತನನ್ನು ಬಿಜೆಪಿ ಪಕ್ಷ ಗುರುತಿಸಿರುವುದಕ್ಕೆ ನಾನೇ ಉದಾಹರಣೆ. ಪಕ್ಷ ಕೊಟ್ಟ ಸಲಹೆ ಸೂಚನೆಯನ್ನು ಪಾಲಿಸುತ್ತೇನೆ. ಕರಾವಳಿ ಭಾಗದ ಉದ್ದಗಲ ಓಡಾಡುತ್ತೇನೆ ಎಂದು ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಎ. ಸುವರ್ಣ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ ರಘುಪತಿ ಭಟ್ ಮಾರ್ಗದರ್ಶನ, ಸಹಕಾರದಲ್ಲಿ ಚುನಾವಣೆಯನ್ನು ಎದುರಿಸುತ್ತೇನೆ. ಶಾಸಕರ ಜೊತೆ ಜನರ ಬಳಿ ಹೋಗಿ ಮತ ಪ್ರಚಾರ ಮಾಡುತ್ತೇನೆ. ರಾಷ್ಟ್ರೀಯ ಚಿಂತನೆ ಹಿಂದೂ ಸಮಾಜದ ರಕ್ಷಣೆ ನನ್ನ ಧ್ಯೇಯ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತೇನೆ. ನಾನು ಒಂದು ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಪಕ್ಷದ ಚಟುವಟಿಕೆಗಳನ್ನು ಬಹಳ ಪ್ರಾಮಾಣಿಕವಾಗಿ ನಾನು ಮಾಡಿದ್ದೇನೆ ಎಂದರು.
ನಾನು ಹಿಂದೂ. ನಾನು ಒಂದು ಜಾತಿಗೆ ಸೀಮಿತವಾಗಿಲ್ಲ. ನಾನು ಹುಟ್ಟುವಾಗ ಮೊಗವೀರ ಜಾತಿಯಲ್ಲಿ ಹುಟ್ಟಿದ್ದೇನೆ. ಅದಕ್ಕೆ ನ್ಯಾಯ ಕೊಡುತ್ತೇನೆ. ಮೀನುಗಾರಿಕೆ, ಸಹಕಾರಿ, ಹಿಂದೂ ಸಂಘಟನೆ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುತ್ತೇನೆ. ಶಾಸಕ ರಘುಪತಿ ಭಟ್ ಅವರನ್ನು ಇವತ್ತು ಭೇಟಿಯಾಗುತ್ತೇನೆ. ಕಳೆದ ಬಹಳ ವರ್ಷಗಳಿಂದ ಅವರ ಜತೆ ಕೆಲಸ ಮಾಡಿದ್ದೇನೆ. ಚುನಾವಣಾ ಪ್ರಚಾರಕ್ಕೆ ಅವರ ಜತೆಗೆ ಹೋಗುವೆ ಎಂದು ಯಶ್ಪಾಲ್ ಎ ಸುವರ್ಣ ಹೇಳಿದರು. ಉಡುಪಿ: ಕ್ಷೇತ್ರದಲ್ಲಿ ಕಾಂಗ್ರೆಸ್ ಖಾಲಿ ಮಾಡಿದ್ದೇವೆ, ಎಲ್ಲ ಸಮುದಾಯದವರ ಸಹಕಾರ ಇದೆ- ಶಾಸಕ ರಘುಪತಿ ಭಟ್
ದೇಶದಲ್ಲಿ ಶೇಕಡಾ ಐವತ್ತರಷ್ಟು ಹಿಂದುಳಿದ ವರ್ಗದವರಿದ್ದಾರೆ. ಕಾಂಗ್ರೆಸ್ ಹಿಂದುಳಿದ ವರ್ಗವನ್ನು ಕಡೆಗಣನೆ ಮಾಡಿತ್ತು. ಮತ ಬ್ಯಾಂಕ್ ಆಗಿ ಬಳಸಿಕೊಂಡಿತ್ತು. ಕಾಂಗ್ರೆಸ್ ಹಿಂದುಳಿದ ವರ್ಗ ದಲಿತರನ್ನು ಸೈಡ್ಲೈನ್ ಮಾಡಿದ್ದರು. ಮೋದಿ ಎಲ್ಲ ವರ್ಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಬಾರಿಯ ಚುನಾವಣೆಯನ್ನು ನನ್ನ ವಿಚಾರ ನನ್ನ ಸಿದ್ಧಾಂತವನ್ನು ಮುಂದಿಟ್ಟುಕೊಂಡು ನಾನು ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.
ರಘುಪತಿ ಭಟ್ಗೆ ಟಿಕೆಟ್ ಮಿಸ್!
ಉಡುಪಿಯಲ್ಲಿ ಹಾಲಿ ಶಾಸಕ ರಘುಪತಿ ಭಟ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಯಶ್ಪಾಲ್ ಎ ಸುವರ್ಣ ಅವರಿಗೆ ಟಿಕೆಟ್ ನೀಡಿದೆ. ಟಿಕೆಟ್ ಮಿಸ್ ಆದ ಬೆನ್ನಲ್ಲಿಯೇ ಪ್ರತಿಕ್ರಿಯಿಸಿರುವ ರಘುಪತಿ ಭಟ್, ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ನಾನು ಯಾವ ಪಕ್ಷಕ್ಕೂ ಹೋಗಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಟಿಕೆಟ್ ಸಿಕ್ಕಿಲ್ಲ ಎನ್ನುವುದಕ್ಕೆ ಬೇಸರವಿಲ್ಲ. ಆದರೆ ಪಕ್ಷ ನಡೆಸಿಕೊಂಡ ರೀತಿ ನೋವು ತಂದಿದೆ. ಅದೇ ಶಾಕ್ನಲ್ಲಿದ್ದೇನೆ ಎಂದು ಹೇಳಿದ್ದಾರೆ.
ಯಶ್ಪಾಲ್ಗೆ ಶ್ರೀರಾಮ ಸೇನೆ ಬೆಂಬಲ!
ಯಶ್ಪಾಲ್ ಸುವರ್ಣ ಅವರಿಗೆ ಟಿಕೆಟ್ ನೀಡಿದ ಬೆನ್ನಲ್ಲಿಯೇ ಶ್ರೀರಾಮ ಸೇನೆ ಬೆಂಬಲ ಘೋಷಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೇಕಲ್ಲು, ಉಡುಪಿ ಜಿಲ್ಲಾ ಶ್ರೀರಾಮಸೇನೆ ಯಶ್ಪಾಲ್ ಅವರಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ. ಪ್ರಬಲ ಹಿಂದೂ ನಾಯಕ, ಯುವಕರ ಕಣ್ಮಣಿಯ ಅಗತ್ಯ ಉಡುಪಿ ಕ್ಷೇತ್ರಕ್ಕಿತ್ತು. ಕಾರ್ಕಳ ಹೊರತು ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಶ್ರೀರಾಮ ಸೇನೆಯ ಅಭ್ಯರ್ಥಿಯನ್ನು ಕಣಕ್ಕಿಳಿಸೋದಿಲ್ಲಎಂದು ಹೇಳಿದ್ದಾರೆ.