ಮಂಡ್ಯ: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶದ ಚಿತ್ತ ಮಂಡ್ಯ ಲೋಕಸಭಾ ಕ್ಷೇತ್ರದತ್ತ ನೆಟ್ಟಿತ್ತು. ಮಾಜಿ ಸಂಸದ, ದಿವಂಗತ ನಟ ಅಂಬರೀಶ್ ಅವರ ಪತ್ನಿ, ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಎದುರಾಳಿಯಾಗಿ ಜೆಡಿಎಸ್ನಿಂದ (JDS) ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಇವರಿಬ್ಬರ ಫೈಟ್ ಹೈ ವೋಲ್ಟೇಜ್ನಿಂದ ಕೂಡಿತ್ತು. ಸಂಸದೆ ಸುಮಲತಾ ಅಂಬರೀಶ್ ಅವರ ವಿರುದ್ಧ ಪ್ರತಿಸ್ಪರ್ಧಿಯಾಗಿ ಸುಮಲತಾ ಎಂಬ ಹೆಸರಿನ ಇನ್ನಿಬ್ಬರು ಸ್ಪರ್ಧೆ ಮಾಡಿದ್ದರು. ಇದರ ಹಿಂದೆ ಜೆಡಿಎಸ್ನ ಹುನ್ನಾರವಿತ್ತು. ಮತಗಳು ವಿಭಜನೆಯಾಗಾಲಿ, ಜನರಲ್ಲಿ ಗೊಂದಲ ಮೂಡಲಿ ಎಂದು ಜೆಡಿಎಸ್ ಸುಮಲತಾ ಎಂಬ ಹೆಸರಿನ ಇಬ್ಬರು ಅಭ್ಯರ್ಥಿಗಳನ್ನು ಪಕ್ಷೇತರವಾಗಿ ನಿಲ್ಲಿಸಿದೆ ಎಂದು ಆರೋಪ ಕೇಳಿಬಂದಿತ್ತು. ಇದು ಚುನಾವಣೆಯಲ್ಲಿ ಜೆಡಿಎಸ್ ಉರುಳಿಸಿದ ದಾಳವಾಗಿತ್ತು. ಈಗ ಚುನಾವಣಾ ಆಯೋಗ ಸುಮಲತಾ ಎಂಬ ಹೆಸರಿನ ಇಬ್ಬರು ಅಭ್ಯರ್ಥಿಗಳಿಗಳನ್ನು ಅನರ್ಹಗೊಳಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಖರ್ಚು ವೆಚ್ಚದ ಬಗ್ಗೆ ಸರಿಯಾದ ದಾಖಲಾತಿ ಸಲ್ಲಿಸದ ಹಿನ್ನೆಲೆ ಇಬ್ಬರು ಸುಮಲತಾ ಸೇರಿದಂತೆ ಮಂಡ್ಯ ಜಿಲ್ಲೆಯ 7 ಅಭ್ಯರ್ಥಿಗಳನ್ನ ಡಿಸ್ಕ್ವಾಲಿಫೈ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಅನರ್ಹಗೊಂಡ ಮಂಡ್ಯದ 7 ಸ್ಪರ್ಧಿಗಳು
ಅರವಿಂದ ಪ್ರೇಮಾನಂದ, ಎನ್.ಸಿ ಪುಟ್ಟೆಗೌಡ, ಸುಮಲತಾ ಟಿ.ಎಮ್ ಹೊಸುರು, ಎಮ್. ಸುಮಲತಾ, ಎಸ್.ಹೆಚ್. ಲಿಂಗೇಗೌಡ್, ಕೆ.ಆರ್. ಶಿವಮಾದೇಗೌಡ, ಬಿಎಸ್ ಗೌಡ.