ಬೆಂಗಳೂರು: ಕಾಂಗ್ರೆಸ್ಸಿನ ಭ್ರಷ್ಟ ಬೇರುಗಳು ಎಷ್ಟೇ ಆಳಕ್ಕೆ ಹೋಗಿದ್ದರು ಅದನ್ನು ಸಿಎಂ ಬಸವರಾಜ್ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ಮೂಲೋತ್ಪಾಟನೆ ಮಾಡಲಿದೆ. ಜನತೆಗೆ ಪಾರದರ್ಶಕ ಆಡಳಿತ ನೀಡುವ ಸಲುವಾಗಿ ಕಾಂಗ್ರೆಸ್ನ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಒಪ್ಪಿಸಲಿದೆ. ಬಿಜೆಪಿ ಯಾವತ್ತಿಗೂ ಭ್ರಷ್ಟರ ಸಿಂಹಸ್ವಪ್ನವೆಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ಹೂತಿಟ್ಟ ಭ್ರಷ್ಟಾಚಾರದ ಬೇರುಗಳನ್ನು ಸಿಎಂ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಬುಡಮೇಲು ಮಾಡಿ, ಜನರಿಗೆ ಪಾರದರ್ಶಕ ಆಡಳಿತ ನೀಡುತ್ತಿದೆ. ಪ್ರಧಾನಿ ಮೋದಿಯವರ ದಕ್ಷ ಆಡಳಿತವು ಎಲ್ಲಾ ಯೋಜನೆಗಳಲ್ಲೂ ‘ಕೈ’ ಆಡಿಸುವ ಭ್ರಷ್ಟರಿಗೆ ತಕ್ಕ ಶಾಸ್ತಿ ಮಾಡುತ್ತಿದೆ’ ಎಂದು ಕುಟುಕಿದೆ.
ತನ್ನ ಆಡಳಿತಾವಧಿಯಲ್ಲಿ ಕಾಂಗ್ರೆಸ್ ರಾಜ್ಯವನ್ನು ಅಕ್ಷರಶಃ ಲೂಟಿ ಮಾಡಿತು. ಅರ್ಕಾವತಿ ಅವ್ಯವಹಾರ, ಮರಳು, ಗಣಿ ಮಾಫಿಯಾಗಳಿಂದ ಕೋಟ್ಯಂತರ ರೂಪಾಯಿ ಹಣ ಲಪಟಾಯಿಸಿತು. ಹಗರಣ ಮುಚ್ಚಿಹಾಕಲು ಸಿದ್ದರಾಮಯ್ಯ ಲೋಕಾಯುಕ್ತದ ಕತ್ತನ್ನೇ ಹಿಸುಕಿದರು. ಆದರೆ ಸಿಎಂ ಬೊಮ್ಮಾಯಿಯವರ ಸರ್ಕಾರ ಪಾರದರ್ಶಕತೆಯನ್ನು ಮರಳಿ ಸ್ಥಾಪಿಸುತ್ತಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಸರ್ಕಾರದ ಖಜಾನೆ ಲೂಟಿಮಾಡಿ ಸಿದ್ದರಾಮಯ್ಯನವರು ತಮ್ಮ ಮೇಲಿದ್ದ 59 ಭ್ರಷ್ಟ ಆರೋಪಗಳಿಂದ ಮುಕ್ತಿ ಪಡೆಯಲು ಲೋಕಾಯುಕ್ತವನ್ನೇ ಮುಚ್ಚಿ ಎಸಿಬಿಯನ್ನು ತೆರೆದರು. ಆದರೆ ಬಿಜೆಪಿ ಮತ್ತೆ ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುವ ಮೂಲಕ ಸ್ವಚ್ಛ ಆಡಳಿತಕ್ಕೆ ನಾಂದಿ ಹಾಡಿದೆ.
ದಶಕಗಳ ಕಾಲ ಕಾಂಗ್ರೆಸ್ನ ಬೆನ್ನೆಲುಬಾಗಿದ್ದ ಟೆಂಡರ್ ಭ್ರಷ್ಟರಿಗೆ ಬೊಮ್ಮಾಯಿ ಸರ್ಕಾರ ಇತಿಶ್ರೀ ಹಾಡಿದೆ. ಗುತ್ತಿಗೆದಾರರೊಂದಿಗೆ
ಸೇರಿ ಹಣ ಲಪಟಾಯಿಸುವ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ನಿವೃತ್ತ ನ್ಯಾಯಾಧೀಶ ರತ್ನಕಲಾ ನೇತೃತ್ವದಲ್ಲಿ ಟೆಂಡರ್ ಪೂರ್ವಪರಿಶೀಲನಾ ಸಮಿತಿ ರಚಿಸಿರುವುದು ಪಾರದರ್ಶಕ ನಡೆಗೆ ಸಾಕ್ಷಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.