ಕೂಗು ನಿಮ್ಮದು ಧ್ವನಿ ನಮ್ಮದು

ಪಡಿತರ ಚೀಟಿ ತಿದ್ದುಪಡಿ ದಿಢೀರ್ ಸ್ಥಗಿತ: ಸೈಬರ್ ಕೇಂದ್ರಗಳಿಗೆ ಜನರ ಅಲೆದಾಟ

ಕಾರವಾರ: ವಿಧಾನಸಭೆ ಚುನಾವಣೆ ಗಲಾಟೆ ನಡುವೆ ಬಿಪಿಎಲ್‌ (ಆದ್ಯತಾ ಕುಟುಂಬ) ಪಡಿತರ ಚೀಟಿಗೆ ಹೆಸರು ಸೇರ್ಪಡೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದ್ದು, ಜನರಿಗೆ ಕಿರಿಕಿರಿ ತಂದೊಡ್ಡಿದೆ. ಯಾಕಾಗಿ ಅರ್ಜಿ ಸ್ವೀಕಾರ, ತಿದ್ದುಪಡಿ ನಿಲ್ಲಿಸಲಾಗಿದೆ ಎಂಬ ಸರಿಯಾದ ಮಾಹಿತಿಯನ್ನೂ ಪ್ರಚಾರ ಮಾಡಿಲ್ಲ. ಇದರಿಂದ ಜನ ಗ್ರಾಮ ಒನ್‌, ಸೈಬರ್‌ ಕೇಂದ್ರಗಳಿಗೆ ಅಲೆಯುತ್ತಿದ್ದಾರೆ. ಇನ್ನೊಂದೆ ನಾಲ್ಕೈದು ತಿಂಗಳು ಎಲ್ಲೆಡೆ ಮದುವೆ ಸಮಾರಂಭಗಳು ಹೆಚ್ಚಾಗುತ್ತಿವೆ. ಮನೆಗೆ ಬರುವ ಹೊಸ ಸದಸ್ಯರ ಹೆಸರನ್ನು ಪಡಿತರ ಚೀಟಿಗೆ ಸೇರಿಸಲು ಜನ ದಾಖಲೆ ಹೊಂದಿಸಿಕೊಳ್ಳುತ್ತಿದ್ದಾರೆ.

ಆದಾಯ, ಜಾತಿ ಪ್ರಮಾಣ ಪತ್ರ ಹಾಗೂ ಆಧಾರ್‌, ಪಡಿತರ ಚೀಟಿ ಅರ್ಜಿ ಎಲ್ಲವೂ ಆನ್‌ಲೈನ್‌ ಆಗಿದೆ. ಅರ್ಜಿ ಹಾಕಿದ ಪಲಾನುಭವಿಗಳಿಗೆ ಆದಾಯ ಪ್ರಮಾಣ ಪತ್ರ ಸಿಗುತ್ತಿದೆ. ಆದರೆ, ರಾಜ್ಯ ಚುನಾವಣೆ ನೆಪದಲ್ಲಿ ಪಡಿತರ ಚೀಟಿಗೆ ಹೊಸ ಸದಸ್ಯರ ಸೇರ್ಪಡೆ ತಡೆಹಿಡಿಯಲಾಗಿದೆ. ಈ ಕುರಿತು ಚುನಾವಣಾ ಆಯೋಗ ಸಹಾಯವಾಣಿಗೆ ಕರೆ ಮಾಡಿದರೆ, ಚುನಾವಣೆಗೂ ಪಡಿತರ ಚೀಟಿ ತಿದ್ದುಪಡಿಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ. ಇದು ಜನರಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.

ಆಹಾರ ಇಲಾಖೆ ಪೋರ್ಟಲ್‌ನಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆ, ನೀತಿ ಸಂಹಿತೆ ಜಾರಿ ಇರುವ ಕಾರಣಕ್ಕೆ ಪಡಿತರ ಚೀಟಿ ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಇಂಗ್ಲಿಷ್‌ನಲ್ಲಿ ತಿಳಿಸಲಾಗಿದೆ. ಕನ್ನಡದಲ್ಲಿ‘ಪಡಿತರ ಚೀಟಿ ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದಷ್ಟೇ ಇದೆ. ಚುನಾವಣಾ ನೀತಿ ಸಂಹಿತೆಗೂ ಪಡಿತರ ಚೀಟಿ ತಿದ್ದುಪಡಿಗೂ ಏನು ಸಂಬಂಧ ಇದೆ ಎಂಬ ಜನರ ಪ್ರಶ್ನೆಗೆ ಸ್ಥಳೀಯ ಅಧಿಕಾರಿಗಳಲ್ಲೂ ಉತ್ತರ ಇಲ್ಲ.

ಗರ್ಭಿಣಿಯರಿಗೆ ತೊಂದರೆ
ಪಡಿತರ ಚೀಟಿ ತಿದ್ದುಪಡಿ ಅವಕಾಶ ಇಲ್ಲದೇ ಇರುವುದು ಗರ್ಭಿಣಿಯರಿಗೆ ಹೆಚ್ಚಿನ ಕಿರಿಕಿರಿ ಉಂಟುಮಾಡುತ್ತಿದೆ. ಗರ್ಭಿಣಿಯಾದ ತಕ್ಷಣವೇ ಅಂಗನವಾಡಿ ಕೇಂದ್ರಗಳ ಮೂಲಕ ಮಹಿಳೆಯ ಮಾಹಿತಿ ದಾಖಲಿಸಿಕೊಳ್ಳಲಾಗುತ್ತದೆ. ತಾಯಿ ಕಾರ್ಡ್‌ ಮಾಡುತ್ತಾರೆ. ಆಗ ಪಡಿತರ ಚೀಟಿ ಬೇಕಾಗುತ್ತದೆ. ಈಗ ಆರ್ಥಿಕ ವರ್ಷದ ಆರಂಭದಲ್ಲಿಯೇ ಪಡಿತರ ಚೀಟಿ ತಿದ್ದುಪಡಿ ಅವಕಾಶ ಇಲ್ಲದಿರುವುದರಿಂದ ಗರ್ಭಿಣಿಯರಿಗೆ ಸಮಸ್ಯೆ ಎದುರಾಗಿದೆ.

ಪರಿಶೀಲನೆ ಮಾಡಬೇಕೆಂದು ಮನವಿ
ಅನಿವಾರ್ಯ ಸಂದರ್ಭದಲ್ಲಿ ಮಹಿಳೆಯ ತಾಯಿ ಮನೆಯ ಪಡಿತರ ಚೀಟಿ ಮೂಲಕ ತಾಯಿ ಕಾರ್ಡು ಮಾಡುವ ಅವಕಾಶ ಇದೆ. ನಂತರ ಪಡಿತರ ಚೀಟಿ ತಿದ್ದುಪಡಿ ಮಾಡಿಕೊಂಡರೆ ತಪಾಸಣೆ, ಹೆರಿಗೆ ವೇಳೆ ಗೊಂದಲ ಉಂಟಾಗುತ್ತದೆ. ಹಲವು ಸುಧಾರಿತ ಕ್ರಮ ಕೈಗೊಳ್ಳುತ್ತಿರುವ ಚುನಾವಣಾ ಆಯೋಗ ಈ ವಿಚಾರದಲ್ಲಿಯೂ ಪರಿಶೀಲನೆ ಮಾಡಬೇಕು ಎನ್ನುವುದು ಜನರ ನಿರೀಕ್ಷೆ.

ಹೆಚ್ಚಿನ ಮಾಹಿತಿ ಕೊರತೆ
ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಪಡಿತರ ಚೀಟಿ ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದು ಚುನಾವಣಾ ಆಯೋಗದ ಕ್ರಮ ಹಾಗಾಗಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಆಹಾರ ಇಲಾಖೆ ಉಪನಿರ್ದೇಶಕರಾದ ಮಂಜುನಾಥ ದತ್ತಾತ್ರೇಯ ತಿಳಿಸಿದ್ದಾರೆ.

error: Content is protected !!