ಬೆಂಗಳೂರು: “ಕಾಂಗ್ರೆಸ್ ಪಕ್ಷದಲ್ಲಿ ನಾನೂ, ಡಿಕೆ ಶಿವಕುಮಾರ್ ಇಬ್ಬರೂ ಸಿಎಂ ಸ್ಥಾನದ ಆಕಾಂಕ್ಷಿಗಳು. ಆದ್ರೆ ಮುಂದಿನ ಸಿಎಂ ಯಾರಾಗಬೇಕೆಂಬ ವಿಚಾರಕ್ಕೆ ಹೈಕಮಾಂಡ್ ಮಧ್ಯಪ್ರವೇಶ ಮಾಡುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಚುನಾಯಿತ ಶಾಸಕರು ಸಿಎಂ ಯಾರೆಂಬುದನ್ನು ಆಯ್ಕೆ ಮಾಡುತ್ತಾರೆಂದು” ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಸಂಚಲನ ಮೂಡಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಕುರಿತಾದ ಪ್ರಶ್ನೆಗೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ರೀತಿಯಾಗಿ ಹೇಳಿದ್ದಾರೆ.
ಇನ್ನು ಕೆಲ ಮಾಧ್ಯಮಗಳಲ್ಲಿ ಡಿಕೆಶಿ ಸಿಎಂ ಆಗಲು ಹೈಕಮಾಂಡ್ ಒಪ್ಪಲ್ಲ ಎಂಬ ರೀತಿ ಹೇಳಿಕೆಗಳು ತಪ್ಪಾಗಿ ಹೋಗುತ್ತಿವೆ. ಇದು ಸತ್ಯಕ್ಕೆ ದೂರವಾಗಿದ್ದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಈ ಹೇಳಿಕೆ ಒಗ್ಗಟ್ಟಿನ ಮಂತ್ರದೊಂದಿಗೆ ಚುನಾವಣೆಗೆ ಅಣಿಯಾಗಿರುವ ಕಾಂಗ್ರೆಸ್ನಲ್ಲಿ ಗೊಂದಲದ ಜತೆಗೆ, ಕೋಲಾಹಲ ಸೃಷ್ಟಿಗೆ ಕಾರಣವಾಗಿತ್ತು. ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಅಂತಿಮಗೊಳಿಸಲು ದಿಲ್ಲಿಯಲ್ಲಿ ಮಂಗಳವಾರ ಕೇಂದ್ರ ಚುನಾವಣಾ ಸಮಿತಿ ನಡೆಯುತ್ತಿರುವ ಬೆನ್ನಲ್ಲೇ ಖಾಸಗಿ ಸುದ್ದಿವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದು, ಪಕ್ಷದೊಳಗೆ ತಳಮಳ ಸೃಷ್ಟಿಸಿದೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆ ಬಳಿಕ ತಮ್ಮ ನಾಯಕನ ಒತ್ತಾಸೆಯಂತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದಶಕದ ನಡುವಿನ ಶತ್ರುತ್ವ ಮರೆತು ಒಟ್ಟಿಗೆ ಹೆಜ್ಜೆ ಹಾಕಿದ್ದರು.