ಹೊಸದಿಲ್ಲಿ: ಮಾರ್ಚ್ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಶೇ. 13ರಷ್ಟು ವೃದ್ಧಿಯಾಗಿದ್ದು, ಒಟ್ಟು 1.60 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಇದು ಜಿಎಸ್ಟಿ ಜಾರಿಗೆ ಬಂದ (2017ರ ಜುಲೈ 1) ನಂತರದಲ್ಲಿ ಎರಡನೇ ಗರಿಷ್ಠ ಸಂಗ್ರಹವಾಗಿದೆ.
ಮಾರ್ಚ್ 31ಕ್ಕೆ ಅಂತ್ಯಗೊಂಡ 2022-23ರ ಹಣಕಾಸು ವರ್ಷದಲ್ಲಿ ಜಿಎಸ್ಟಿ ಆದಾಯದ ಬೆಳವಣಿಗೆ ಶೇ 22ರಷ್ಟು ವೃದ್ಧಿಯಾಗಿದೆ. ಒಟ್ಟು 18 ಲಕ್ಷ ಕೋಟಿ ರೂ.ಗೂ ಅಧಿಕ ಆದಾಯ ಸಂಗ್ರಹವಾಗಿದೆ. ಪೂರ್ಣ ವರ್ಷದ ಸರಾಸರಿ ಒಟ್ಟು ಮಾಸಿಕ ಸಂಗ್ರಹವು 1.51 ಲಕ್ಷ ಕೋಟಿ ರೂ.ಗಳಷ್ಟಿದೆ
ಮಾರ್ಚ್ 2023ರಲ್ಲಿ ಒಟ್ಟು ಜಿಎಸ್ಟಿ ಆದಾಯವು 1,60,122 ಕೋಟಿ ರೂಪಾಯಿಯಷ್ಟಿದೆ. ಅದರಲ್ಲಿ ಕೇಂದ್ರದ ಜಿಎಸ್ಟಿ (ಸಿಜಿಎಸ್ಟಿ) 29,546 ಕೋಟಿ ರೂಪಾಯಿಗಳು, ರಾಜ್ಯ ಜಿಎಸ್ಟಿ (ಎಸ್ಜಿಎಸ್ಟಿ) 37,314 ಕೋಟಿ ರೂಪಾಯಿಗಳು, ಇಂಟಿಗ್ರೇಟೆಡ್ ಜಿಎಸ್ಟಿ 82,907 ಕೋಟಿ ರೂಪಾಯಿಗಳು (42,503 ಕೋಟಿ ರೂ.ಗಳನ್ನು ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾಗಿದೆ). ಅಲ್ಲದೇ, 10,355 ಕೋಟಿ ರೂ. ಸೆಸ್ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆ ತಿಳಿಸಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಮಾರ್ಚ್ ನಾಲ್ಕನೇ ಬಾರಿಗೆ ಮಾಸಿಕ ಒಟ್ಟು ಜಿಎಸ್ಟಿ ಸಂಗ್ರಹವು 1.5 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಕಳೆದ ತಿಂಗಳು ಅತಿ ಹೆಚ್ಚು ಐಜಿಎಸ್ಟಿ ಸಂಗ್ರಹವಾಗಿತ್ತು ಎಂದು ಸಚಿವಾಲಯ ತಿಳಿಸಿದೆ.
ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಏನು ಕಾರಣ?
ಮಾರ್ಚ್ನಲ್ಲಿ ಶೇ 91ರಷ್ಟು ಜಿಎಸ್ಟಿ ಜಿಎಸ್ಟಿ ನೋಂದಾಯಿತ ವ್ಯವಹಾರಸ್ಥರು ರಿಟರ್ನ್ಸ್ ಸಲ್ಲಿಸಿದ್ದು, ತೆರಿಗೆಗಳನ್ನು ಪಾವತಿಸಿದ್ದಾರೆ. ಜಿಎಸ್ಟಿ ಸಂಗ್ರಹದಲ್ಲಿನ ಏರಿಕೆಯು ದೇಶದ ಆರ್ಥಿಕ ಚಟುವಟಿಕೆಗಳು ಸುಧಾರಿಸುವುದನ್ನು ಪ್ರತಿಬಿಂಬಿಸುತ್ತಿದೆ ಎಂದು ಸರಕಾರವು ಹೇಳಿಕೊಂಡಿದೆ. ಆದಾಗ್ಯೂ, ಹೆಚ್ಚಿನ ಹಣದುಬ್ಬರದಿಂದಾಗಿಯೇ ತೆರಿಗೆ ಸಂಗ್ರಹ ವೃದ್ದಿಯಾಗಿದೆ ಎಂದು ಕೆಲವು ವಿತ್ತ ತಜ್ಞರು ವಿಶ್ಲೇಷಿಸಿದ್ದಾರೆ.
“ಭಾರತದ ಆರ್ಥಿಕತೆಯು ಬೆಳವಣಿಗೆಯ ಹಾದಿಯಲ್ಲಿದೆ ಎನ್ನುವುದನ್ನು ಜಿಎಸ್ಟಿ ಸಂಗ್ರಹದ ಹೆಚ್ಚಳವೇ ಬಿಂಬಿಸಿದೆ. ಅಲ್ಲದೇ, ತೆರಿಗೆ ವಂಚನೆಯನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಕೈಗೊಂಡ ಕ್ರಮಗಳೂ ಫಲ ನೀಡಿವೆ”ಕೆಪಿಎಂಜಿ ಇಂಡಿಯಾದ ಪರೋಕ್ಷ ತೆರಿಗೆ ವಿಭಾಗದ ಪಾರ್ಟ್ನರ್ ಅಭಿಷೇಕ್ ಜೈನ್ ತಿಳಿಸಿದ್ದಾರೆ.
ಮಾರ್ಚ್ 2023ರಲ್ಲಿನ ಜಿಎಸ್ಟಿ ಆದಾಯ- 1,60,122 ಕೋಟಿ ರೂ. 8.10 ಲಕ್ಷ ಕೋಟಿ ರೂ.- ಹಣಕಾಸು ವರ್ಷ 2022-23ರಲ್ಲಾದ ಒಟ್ಟು ಜಿಎಸ್ಟಿ ಸಂಗ್ರಹ 18 ಲಕ್ಷ ಕೋಟಿ ರೂ.ಗಳನ್ನು ದಾಟಿದ್ದು, ಶೇ 22ರಷ್ಟು ಬೆಳವಣಿಗೆ ದಾಖಲಾಗಿದೆ.
ಕರ್ನಾಟಕ ನಂ.2- ಮಾರ್ಚ್ನಲ್ಲಿ ಕರ್ನಾಟಕದಲ್ಲಿ 10,360 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ದೇಶದಲ್ಲಿಯೇ ರಾಜ್ಯವು ತೆರಿಗೆ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 18.40ರಷ್ಟು ಏರಿಕೆಯಾಗಿದೆ.
2ನೇ ಗರಿಷ್ಠ ಆದಾಯದ ದಾಖಲೆ- 2017ರ ಜುಲೈನಲ್ಲಿ ಜಿಎಸ್ಟಿ ಜಾರಿಗೊಂಡಿದ್ದು, ಕಳೆದ ಮಾರ್ಚ್ನಲ್ಲಿ 2ನೇ ಗರಿಷ್ಠ ಮಾಸಿಕ ಜಿಎಸ್ಟಿ ಸಂಗ್ರಹ
13%- ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರ್ಚ್ನಲ್ಲಿ ತೆರಿಗೆ ಸಂಗ್ರಹದಲ್ಲಾಗಿರುವ ಏರಿಕೆ
ಗಳಿಕೆಯಲ್ಲಿ ಟಾಪ್-10 ರಾಜ್ಯಗಳು
ಮಹಾರಾಷ್ಟ್ರ: 22,695 ಕೋಟಿ ರೂ.
ಕರ್ನಾಟಕ: 10,360 ಕೋಟಿ ರೂ.
ಗುಜರಾತ್: 9,919 ಕೋಟಿ ರೂ.
ತಮಿಳುನಾಡು: 9,245 ಕೋಟಿ ರೂ.
ಹರಿಯಾಣ: 7,780 ಕೋಟಿ ರೂ.
ಉತ್ತರ ಪ್ರದೇಶ: 7,613 ಕೋಟಿ ರೂ.
ಪಶ್ಚಿಮ ಬಂಗಾಳ: 5,092 ಕೋಟಿ ರೂ.
ಹೊಸದಿಲ್ಲಿ: 4,840 ಕೋಟಿ ರೂ.
ತೆಲಂಗಾಣ: 4,804 ಕೋಟಿ ರೂ.
ಒಡಿಶಾ: 4,749 ಕೋಟಿ ರೂ.