ಕೋಲಾರ: ಎಲ್ಲ ವಿಚಾರವನ್ನು ಪೊಲೀಸ್ ಇಲಾಖೆ ತಲೆ ಮೇಲೆ ಹಾಕುವುದಲ್ಲ. ಮೊದಲು ಆ ವಿಚಾರವು ಯಾರ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನು ತಿಳಿದು ಕ್ರಮಕ್ಕೆ ಮುಂದಾಗಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು. ನಗರ ಹೊರವಲಯದ ಎಸ್‌ಪಿ ಕಚೇರಿ ಆವರಣದಲ್ಲಿ ಶನಿವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಸಾರ್ವಜನಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಧಿಕಾರವಿಲ್ಲದ ವಿಚಾರಕ್ಕೆ ನಾವು ನೇರವಾಗಿ ಕೈ ಹಾಕಲು ಸಾಧ್ಯವಿಲ್ಲ. ಹಾಗಾಗಿ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಆಯಾ ವ್ಯಾಪ್ತಿ ತಿಳಿದುಕೊಳ್ಳಬೇಕು. ಉದಾಹರಣೆಗೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಎಸ್‌ಪಿ ಏಕಾಏಕಿ ಕ್ರಮಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಸಮಿತಿಗೆ ಡಿಸಿ ಅಧ್ಯಕ್ಷರಾಗಿರುತ್ತಾರೆ. ಮಾಲೂರಿನಲ್ಲಿನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ನಾಟಕವಾಡಿದ್ದ ಇನ್ಸ್‌ಪೆಕ್ಟರ್ ಮೇಲೆ ನಾವೇ ಕ್ರಮಕೈಗೊಂಡಿದ್ದೀವಿ ಅಲ್ಲವೆ ಎಂದು ಪ್ರಶ್ನಿಸಿದರು
ತಪಾಸಣೆಗೆ ಸಹಕರಿಸಿ!
ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ವಾಹನಗಳ ತಪಾಸಣೆ ನಡೆಸಬೇಕಾಗಿದ್ದು, ಸಾರ್ವಜನಿಕರೂ ಸಹಕರಿಸಬೇಕಿದೆ. ಇಂತಹ ಸಂದರ್ಭದಲ್ಲಿಆಂಬುಲೆನ್ಸ್‌ಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವ್ಯಕ್ತಿಗೆ ಏನೂ ಆಗಿಲ್ಲಆದರೂ ಮಲಗಿಸಿ ಹೋಗುತ್ತಿದ್ದರು. ಹಿಡಿದಾಗ ಹಣ ಸಿಕ್ಕಿದೆ. ಅಕ್ರಮವಾಗಿ ಹಣ, ಮದ್ಯ, ಚಿನ್ನ ಮತ್ತಿತರ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಅಲ್ಲದೆ, 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ದಾಖಲೆ ಇಲ್ಲದೇ ಕೊಂಡೊಯ್ಯಬೇಡಿ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕಡ್ಡಾಯವಾಗಿ ಮಾಡುತ್ತೇವೆ ಸಹಕರಿಸಿ ಎಂದರು.
ಸಂವಾದ ಕಾರ್ಯಕ್ರಮ: ಅಟ್ರಾಸಿಟಿ ಸಮಿತಿ ಸದಸ್ಯ ಬೆಳಮಾರನಹಳ್ಳಿ ಆನಂದ್ ಮಾತನಾಡಿ, ದೇಶದಲ್ಲೇ ಅತಿ ಹೆಚ್ಚು ದಲಿತರು ಇರುವ ಜಿಲ್ಲೆ ಕೋಲಾರ. ಸ್ಮಶಾನಗಳ ವಿಚಾರವಾಗಿ ತೊಂದರೆಯಾಗುತ್ತಿದೆ. ದೇವರ ಕಾರ್ಯಗಳಲ್ಲಿ ಗಲಾಟೆಗಳಾಗುವ ಸಂದರ್ಭದಲ್ಲಿ ಪೊಲೀಸರು ಹೆಚ್ಚಿನ ಒತ್ತು ನೀಡಬೇಕು ಎಂದು ಕೋರಿದರು. ಇದಕ್ಕೆ ಉತ್ತ ರಿಸಿದ ಅಲೋಕ್ ಕುಮಾರ್, ಅಸ್ಪೃಶ್ಯತೆ ಆಚರಣೆ ಸರಿಯಲ್ಲ. ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕಿದ್ದು, ಪೊಲೀಸ್ ಇಲಾಖೆಯಿಂದ ನಿರ್ಲಕ್ಷಿಸುವುದು ಸರಿಯಲ್ಲ. ಚುನಾವಣೆ ಬಳಿಕ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ದಸಂಸ ಮುಖಂಡ ನಾಗನಾಳ ಮುನಿಯಪ್ಪ ಮಾತನಾಡಿ, ಅಟ್ರಾಸಿಟಿ ಪ್ರಕರಣದಲ್ಲಿ ಗಾಂಭೀರ್ಯತೆ ಅರಿತು ಕೌಂಟರ್ ಕೇಸ್ ದಾಖಲಿಸಿದರೆ ನೊಂದವರಿಗೂ ಅನುಕೂಲವಾಗುತ್ತದೆ ಎಂದಾಗ, ಅಲೋಕ್ ಕುಮಾರ್ ಮಾತನಾಡಿ, ಕೌಂಟರ್ ಕೇಸ್ ವೇಳೆ ಎಚ್ಚರ ವಹಿಸಬೇಕು. ನೊಂದವರನ್ನು ನೋಯಿಸುವುದು ಬೇಡ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿಗೌಡ ಮಾತನಾಡಿ, ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳಾಗುತ್ತಿವೆ. ಪ್ರತಿ ತಾಲೂಕಿನಲ್ಲಿಮಹಿಳಾ ಠಾಣೆಗಳನ್ನು ಆರಂಭಿಸುವ ಜತೆಗೆ ಮಹಿಳಾ ಅಧಿಕಾರಿ, ಸಿಬ್ಬಂದಿಯನ್ನು ನೇಮಕ ಮಾಡ ಬೇಕು ಎಂದು ಆಗ್ರಹಿಸಿ. ಗ್ರಾಮೀಣ ಭಾಗದ ಅಂಗಡಿಗಳಲ್ಲಿಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಅಲೋಕ್ ಕುಮಾರ್, ಎಲ್ಲರೂ ಮಹಿಳೆಯರೇ ಇರಬೇಕೆಂದರೆ ಕಷ್ಟ ದಸ್ತಗಿರಿ ವೇಳೆ ತೊಂದರೆಯಾಗುತ್ತದೆ. ಹೀಗಾಗಿ ಪುರುಷರು ಇರಬೇಕು. ಪ್ರತಿ ತಾಲೂಕಿನಲ್ಲಿಯೂ ಠಾಣೆ ಆರಂಭಿಸಲು ಕಷ್ಟ. ಎಲ್ಲಠಾಣೆಗಳಲ್ಲಿ ಮಹಿಳಾ ಸಿಬ್ಬಂದಿ ಇರುತ್ತಾರೆ. ಚುನಾವಣೆ ಪ್ರಯುಕ್ತ ಅಬಕಾರಿ, ಪೊಲೀಸ್ ದಾಳಿಗಳನ್ನು ನಡೆಸುತ್ತಿದ್ದು, ಅಕ್ರಮ ಮದ್ಯದ ಮೇಲೆ ದಾಳಿ ನಡೆಸಲಾಗುತ್ತಿದೆ. ನಿರ್ಧಿಷ್ಟ ಮಾಹಿತಿ ನೀಡಿದರೆ ತ್ವರಿತವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು