ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಧಾರವಾಡ ಬೆಳಗಾವಿ ಗದಗ ಬಾಗಲಕೋಟೆ ಜಿಲ್ಲೆಗಳಲ್ಲಿ ದಶಕಗಳಿಂದಲೂ ಮಹದಾಯಿ ನೀರಿಗಾಗಿ ಹೋರಾಟ ನಡೆಯುತ್ತಿದೆ. ದಶಕಗಳಿಂದ ಹೋರಾಟ ನಡೆಸಿಕೊಂಡು ಬಂದರೂ ಮಹದಾಯಿ ನೀರು ಸಮಸ್ಯೆ ಇನ್ನೂ ಬಗೆಹರದಿಲ್ಲ. ಹೀಗಾಗಿ ಮಹದಾಯಿ ಯೋಜನೆ ಅನುಷ್ಠಾನದ ವಿಳಂಬ ನೀತಿಗೆ ಬೇಸತ್ತು ಮಹದಾಯಿ ಹೋರಾಟಗಾರರು ಚುನಾವಣಾ ಆಖಾಡಕ್ಕೆ ಇಳಿದಿದ್ದಾರೆ. ಈ ಮೂಲಕ ರಾಜಕೀಯ ಪಕ್ಷಗಳಿಗೆ ರಾಜಕೀಯದಿಂದಲೇ ಹೊಡೆತ ನೀಡಲು ಮುಂದಾಗಿದ್ದಾರೆ. ಮಹದಾಯಿ ಅಚ್ಚುಕಟ್ಟು ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕ್ಷೇತ್ರಗಳಲ್ಲಿ ಹೋರಾಟಗಾರರು ಸ್ಪರ್ಧೆ ಮಾಡಲಿದ್ದಾರೆ. ನಾಲ್ಕೂ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಮಹದಾಯಿ ಹೋರಾಟಗಾರರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಮಹದಾಯಿ ರೈತ ಸೇನಾ ಘಟಕದ ಮುಖಂಡ ವಿರೇಶ ಸೊಬರದಮಠ ನೇತೃತ್ವದಲ್ಲಿ ಹೋರಾಟಗಾರರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ವಿರೇಶ ಸೊಬರದಮಠ ಬಂಡಾಯದ ನೆಲ ನರಗುಂದದಿಂದಲೇ ಚುನಾವಣೆಗೆ ನಿಲ್ಲಲ್ಲು ಸಜ್ಜಾಗಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿರೇಶ ಸೊಬರದಮಠ ನಾನು ನರಗುಂದ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಆದರೆ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಅನ್ನೋದನ್ನ ಚರ್ಚಿಸಿ ಅಂತಿಮ ಮಾಡುತ್ತೇನೆ ಎಂದು ಹೇಳಿದರು.
ಕಳೆದ ವರ್ಷ ಡಿಸೆಂಬರ್ 29 ರಂದು ಕೇಂದ್ರ ಜಲ ಆಯೋಗ ಮಹದಾಯಿ ಯೋಜನೆ ಡಿಪಿಆರ್ಗೆ ಅನುಮೋದನೆ ನೀಡಿದೆ. ಅನುಮೋದನೆ ನೀಡಿದರು ಮಹದಾಯಿ ಕಾಮಗಾರಿಗೆ ಟೈಗರ್ ಕಾರಿಡಾರ್ ಅನುಮತಿ ಸಿಕ್ಕಿಲ್ಲ. ಅನುಮತಿ ಇಲ್ಲವಾದರೆ ಕಾಮಗಾರಿ ನಡೆಯುವುದು ಹೇಗೆ ಎಂದು ಮಹದಾಯಿ ಹೋರಾಟಗಾರರು ಪ್ರಶ್ನೆ ಮಾಡಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಮಾರ್ಚ್ 29 ರಿಂದ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.