ಕೂಗು ನಿಮ್ಮದು ಧ್ವನಿ ನಮ್ಮದು

ಮೂವತ್ತು ಕೋಟಿ ಒಡೆಯನಾದ್ರು ಊಟ ಹಾಕದ ಮಗ: ಕಿರುಕುಳಕ್ಕೆ ನೊಂದು ವೃದ್ಧ ಪೋಷಕರ ಆತ್ಮಹತ್ಯೆ

ಚಂಡೀಗಢ: ಆ ವೃದ್ಧ ದಂಪತಿಯ ಓರ್ವ ಪುತ್ರ 30 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯ. ಇಬ್ಬರು ಮೊಮ್ಮಕ್ಕಳ ಪೈಕಿ ಒಬ್ಬಾತ 2021ನೇ ಬ್ಯಾಚ್‌ನ ಹರಿಯಾಣ ಕೇಡರ್‌ನ ಐಎಎಸ್‌ ಅಧಿಕಾರಿ. ಇನ್ನೊಬ್ಬ ಸೇನೆಯಲ್ಲಿ ಅಧಿಕಾರಿ. ಇಂಥ ಸೌಭಾಗ್ಯವಿದ್ದರೂ ವೃದ್ಧ ದಂಪತಿಗೆ ಒಂದೊತ್ತಿನ ಊಟವೂ ಸಿಗುತ್ತಿರಲಿಲ್ಲ. ಕುಟುಂಬ ಸದಸ್ಯರು ನಡೆಸಿದ ದೌರ್ಜನ್ಯದಿಂದ ಬೇಸತ್ತು ಕೊನೆಗೆ ಆತ್ಮಹತ್ಯೆಗೆ ಶರಣಾಗಿವೆ ಹಿರಿಯ ಜೀವಗಳು!

ಮಾರ್ಚ್ 29ರಂದು ಸಲ್ಫಾಸ್‌ ಟ್ಯಾಬ್ಲೆಟ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಂಪತಿಯ ಹೆಸರು ಜಗದೀಶ್‌ ಚಂದ್ರ ಆರ್ಯ (78) ಮತ್ತು ಅವರ ಪತ್ನಿ ಭಾಗ್ಲಿದೇವಿ (77). ಹರಿಯಾಣದ ಚಾರ್ಕಿ ದಾರಿ ಜಿಲ್ಲೆಯ ಭದ್ರಾದ ಶಿವ ಕಾಲೋನಿಯ ಮನೆಯಲ್ಲಿ ದಂಪತಿ ಶವವಾಗಿ ಪತ್ತೆಯಾಗಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ದಂಪತಿ ಬರೆದಿಟ್ಟ ಡೆತ್‌ನೋಟ್‌ ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಮಕ್ಕಳು ಇಳಿವಯಸ್ಸಿನ ತಮ್ಮ ತಂದೆ-ತಾಯಿಯನ್ನು ಮುತುವರ್ಜಿಯಿಂದ ನೋಡಿಕೊಳ್ಳದೇ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದರು. ಮನೆಯಲ್ಲಿ ಎಲ್ಲರೂ ತಿಂದು ಉಳಿದ, ಇಲ್ಲವೇ ಹಳಸಿದ ಊಟ ನೀಡಿ ಹಿಂಸಿಸುತ್ತಿದ್ದರು ಎಂದು ದಂಪತಿ, ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಅಲ್ಲದೇ ತಮ್ಮ ಆಸ್ತಿ ಹಾಗೂ ನಿಶ್ಚಿತ ಠೇವಣಿಗಳನ್ನು ಮಕ್ಕಳಿಗೆ ನೀಡದೇ ಆರ್ಯ ಸಮಾಜಕ್ಕೆ ದೇಣಿಗೆಯಾಗಿ ನೀಡಬೇಕು ಎಂದು ಅದರಲ್ಲಿ ಉಲ್ಲೇಖಿಸಿದ್ದಾರೆ.

ಕ್ರಮ ಕೈಗೊಳ್ಳಿ, ಆಗಲೇ ಆತ್ಮಕ್ಕೆ ಶಾಂತಿ
”ಮೊದಲಿಗೆ ನಾವಿಬ್ಬರೂ ಕಿರಿಯ ಪುತ್ರ ಮಹೇಂದರ್‌ ಜತೆ ವಾಸಿಸುತ್ತಿದ್ದೆವು. ಅವನು 6 ವರ್ಷದ ಹಿಂದೆ ತೀರಿಕೊಂಡ. ಇತ್ತೀಚೆಗೆ ಸೊಸೆ ನೀಲಮ್‌ ನಮ್ಮನ್ನು ನಾಯಿಗಿಂತಲೂ ಕಡೆಯಾಗಿ ನೋಡುತ್ತಿದ್ದಳು. ಹಳಸಿದ ಊಟ ನೀಡುತ್ತಿದ್ದಳು. ಎಲ್ಲವನ್ನೂ ಸಹಿಸಿಕೊಂಡೇ ಇದ್ದೆವು. ಆದರೆ ಸೊಸೆ ವಿಕಾಸ್‌ ಎಂಬಾತನ ಸಂಬಂಧ ಬೆಳೆಸಿದ್ದಕ್ಕೆ ಆಕ್ಷೇಪಿಸಿದವು. ಇದರಿಂದ ಸಿಟ್ಟಿಗೆದ್ದ ಆಕೆಯು ನಮ್ಮನ್ನು ಮನೆಯಿಂದ ಹೊರಹಾಕಿದಳು. ಎರಡು ವರ್ಷ ವೃದ್ಧಾಶ್ರಮದಲ್ಲಿ ಜೀವನ ಸಾಗಿಸಿದೆವು. ಇಂಥ ಹೊತ್ತಲ್ಲಿ ಪತ್ನಿಗೆ ಪಾಶ್ರ್ವವಾಯುವಿಗೆ ತುತ್ತಾದಳು. ಹೀಗಾಗಿ ನಾವು ಹಿರಿಯ ಮಗ ವಿರೇಂದ್ರ ಜತೆ ವಾಸಿಸಲು ಶುರು ಮಾಡಿದೆವು. ಆದರೆ ಅಲ್ಲಿಯೂ ನಮ್ಮನ್ನು ನಿಕೃಷ್ಟವಾಗಿ ನೋಡಿಕೊಳ್ಳಲು ಶುರು ಮಾಡಿದರು. ಯಾವ ತಂದೆ-ತಾಯಿಯೂ ಮಕ್ಕಳ ಕೈಯಲ್ಲಿಯೇ ಹೀಗೆ ಅವಮಾನಕರ ರೀತಿಯಲ್ಲಿ ಬದುಕಲು ಇಚ್ಛಿಸುವುದಿಲ್ಲ. ಹೀಗಾಗಿಯೇ ನಾವಿಬ್ಬರೂ ಸಲ್ಫಾಸ್‌ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ,” ಎಂದು ದಂಪತಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ನಮ್ಮಿಬ್ಬರ ಸಾವಿಗೆ ಹಿರಿಯ ಮಗ ವಿರೇಂದ್ರ ಆರ್ಯ ಹಾಗೂ ಅವನ ಪತ್ನಿ ಸುನೀತಾ, ಹಿರಿಯ ಸೊಸೆ ನೀಲಮ್‌ ಮತ್ತು ಆಕೆಯ ಸ್ನೇಹಿತ ವಿಕಾಸ್‌ ಕಾರಣ. ಎಲ್ಲರೂ ನಮ್ಮ ಈ ಡೆತ್‌ನೋಟ್‌ ಓದಬೇಕು. ಸರಕಾರ ಈ ನಾಲ್ವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಗಲೇ ನಮ್ಮ ಆತ್ಮಕ್ಕೆ ಶಾಂತಿ ದೊರೆಯುತ್ತದೆ,” ಎಂದೂ ಡೆತ್‌ನೋಟ್‌ನಲ್ಲಿ ಬರೆದಿರುವುದು ಕಠೋರ ಹೃದಯಿಗಳನ್ನೂ ಭಾವುಕರನ್ನಾಗಿಸುವಂತೆ ಇದೆ.

ಪೊಲೀಸರು ಡೆತ್‌ನೋಟ್‌ ಅನ್ನೇ ದೂರನ್ನಾಗಿ ಪರಿಗಣಿಸಿ, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!