ಮನಿಲಾ: ಸುಮಾರು 250 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದ ಹಡಗಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 31 ಮಂದಿ ಜೀವ ಕಳೆದುಕೊಂಡ ಭಯಾನಕ ಘಟನೆ ಫಿಲಿಪ್ಪೀನ್ಸ್‌ನಲ್ಲಿ ಸಂಭವಿಸಿದೆ. ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ರಾತ್ರಿಯಿಡೀ ಸುಮಾರು ಎಂಟು ಗಂಟೆಗಳ ಕಾಲ ದಹಿಸಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಎಂವಿ ಲೇಡಿ ಮೇರಿ ಜಾಯ್ 3 ಹಡಗಿನಲ್ಲಿ ಬೆಂಕಿ ಅವಘಡ ಉಂಟಾಗಿದೆ. 200ಕ್ಕೂ ಹೆಚ್ಚು ಜನರು ಜೀವ ಉಳಿಸಿಕೊಳ್ಳಲು ನೀರಿಗೆ ಜಿಗಿದಿದ್ದಾರೆ. ದಟ್ಟವಾದ ಕತ್ತಲಿನಲ್ಲಿಯೂ ಕರಾವಳಿ ಕಾವಲು ಪಡೆ, ನೌಕಾ ಪಡೆ, ಸಮೀಪದಲ್ಲಿದ್ದ ದೋಣಿ ಹಾಗೂ ಸ್ಥಳೀಯ ಮೀನುಗಾರರು ಅವರನ್ನು ರಕ್ಷಿಸಿದ್ದಾರೆ ಎಂದು ಬಸಿಲನ್‌ನ ದಕ್ಷಿಣ ಪ್ರಾಂತ್ಯದ ಗವರ್ನರ್ ಜಿಮ್ ಹತಮಾನ್ ತಿಳಿಸಿದ್ದಾರೆ. ಇನ್ನೂ ಕನಿಷ್ಠ ಏಳು ಮಂದಿ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಅಗ್ನಿ ಅವಘಡದಲ್ಲಿ ಸುಟ್ಟು ಹೋದ ಹಡಗನ್ನು ಬಸಿಲನ್‌ನ ಕರಾವಳಿ ಪ್ರದೇಶಕ್ಕೆ ಎಳೆದು ತರಲಾಗಿದೆ. ಬೆಂಕಿಯಲ್ಲಿ ಸುಟ್ಟು ಬೆಂದು ಹೋದ 31 ಮೃತರ ಪೈಕಿ, 18 ಶವಗಳು ಪ್ಯಾಸೆಂಜರ್ ಕ್ಯಾಬಿನ್‌ನ ಬಜೆಟ್ ಸೆಕ್ಷನ್‌ನಲ್ಲಿ ಕಂಡುಬಂದಿವೆ.
“ಈ ಬಲಿಪಶುಗಳು ಇದ್ದ ಜಾಗದಲ್ಲಿಯೇ ಬೆಂಕಿಯ ಜ್ವಾಲೆಗಳಿಗೆ ಸುಟ್ಟು ಹೋಗಿದ್ದಾರೆ. ಹಡಗಿನ ಪ್ರಯಾಣಿಕರ ಪಟ್ಟಿಯಲ್ಲಿ ಇಲ್ಲದ ಇನ್ನೂ ಅನೇಕ ಮಂದಿ ಈ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು” ಎಂದು ಹತಮಾನ್ ಮಾಹಿತಿ ನೀಡಿದ್ದಾರೆ.
ಸಾಧ್ಯವಾದಷ್ಟು ಹೆಚ್ಚು ಜನರನ್ನು ಬದುಕಿಸಲು, ಬೆಂಕಿ ದಹಿಸುತ್ತಿದ್ದ ಹಡಗನ್ನು ಸಮೀಪದ ತೀರಕ್ಕೆ ಸಾಗಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾಗಿ ಹಡಗಿನ ನಾಯಕ ಕರಾವಳಿ ಕಾವಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸುಮಾರು ಎಂಟು ಗಂಟೆ ಕಾಲ ಹಡಗು ಹೊತ್ತಿ ಉರಿದಿದೆ ಎಂದು ಪ್ರಾದೇಶಿಕ ಕರಾವಳಿ ಕಾವಲು ಕಮಾಂಡರ್ ರೆಜಾರ್ಡ್ ಮಾರ್ಫೆ ತಿಳಿಸಿದ್ದಾರೆ.
ಈ ಹಡಗು ದಕ್ಷಿಣ ಬಂದರು ನಗರ ಜಾಂಬೊಂಗಾದಿಂದ ಸುಲು ಪ್ರಾಂತ್ಯದ ಜೊಲೊ ಪಟ್ಟಣಕ್ಕೆ ತೆರಳುತ್ತಿತ್ತು. ಬಸಿಲನ್ ಸಮೀಪದಲ್ಲಿ ಮಧ್ಯರಾತ್ರಿ ವೇಳೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಕನಿಷ್ಠ 23 ಮಂದಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಎಂದು ಹತಮಾನ್ ಹೇಳಿದ್ದಾರೆ.
ಘಟನೆ ಸಂಭವಿಸಿದಾಗ ಹೆಚ್ಚಿನ ಪ್ರಯಾಣಿಕರು ಸವಿ ನಿದ್ದೆಯಲ್ಲಿದ್ದರು. ಹೀಗಾಗಿ ಬೆಂಕಿಯಿಂದ ಉದ್ಭವವಾದ ಭಾರಿ ಹೊಗೆಯಿಂದಾಗಿ ಮಲಗಿದ್ದಲ್ಲಿಯೇ ಉಸಿರುಗಟ್ಟಿ ಸತ್ತಿದ್ದಾರೆ. ಇನ್ನು ಕೆಲವರು ಹಡಗಿನಿಂದ ನೀರಿಗೆ ಜಿಗಿದ್ದಾರೆ ಎಂದು ವಿವರಿಸಿದ್ದಾರೆ. ಈ ಹಡಗು 430 ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಅದು ಅತಿಯಾಗಿ ಜನರಿಂದ ತುಂಬಿಕೊಂಡಿರಲಿಲ್ಲ. ಹಡಗಿನ ಪ್ರಯಾಣ ಪಟ್ಟಿ ಪ್ರಕಾರ, 205 ಪ್ರಯಾಣಿಕರು ಮತ್ತು 35 ಸಿಬ್ಬಂದಿ ಹಡಗಿನಲ್ಲಿದ್ದರು. ಅದರ ಜತೆಗೆ ಭದ್ರತೆಗಾಗಿ ನಾಲ್ವರು ಕರಾವಳಿ ಕಾವಲು ಮಾರ್ಷಲ್‌ಗಳು ಇದ್ದರು. ಅವರಲ್ಲದೆ, ಪ್ರಣಾಳಿಕೆಯಲ್ಲಿ ನಮೂದಿಸದೆ, ನಿರ್ದಿಷ್ಟ ಸಂಖ್ಯೆ ದೊರಕದ ಸೈನಿಕರು ಕೂಡ ಇದ್ದರು ಎಂದು ಮಾರ್ಫೆ ಹೇಳಿದ್ದಾರೆ