ಮಹೇಶ್ ವಿಜಾಪುರ ಬೆಳಗಾವಿ
ರಾಜಕೀಯ ಪಕ್ಷಗಳೇನೋ ‘ಕುಟುಂಬ ರಾಜಕಾರಣ ನಿಯಂತ್ರಿಸುತ್ತೇವೆ’ ಎಂದು ಪದೇ ಪದೆ ಹೇಳಿಕೊಳ್ಳುತ್ತಿವೆ. ಆದರೆ, ಅದು ಬಾಯಿ ಮಾತು ಹಾಗೂ ಪ್ರಚಾರಕ್ಕಷ್ಟೇ ಸೀಮಿತ ಎಂಬುದು ಪ್ರತಿ ಚುನಾವಣೆಯಲ್ಲೂ ಸಾಬೀತಾಗುತ್ತಿದೆ. ಬೆಳಗಾವಿ ಜಿಲ್ಲೆಯ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಇಲ್ಲಿಒಂದೇ ವ್ಯಕ್ತಿ ಮತ್ತು ಒಂದೇ ಕುಟುಂಬದ ಸದಸ್ಯರೇ ಚುನಾವಣೆಗಳಲ್ಲಿ ಮತ್ತೆ ಮತ್ತೆ ಸ್ಪರ್ಧೆ ಬಯಸುತ್ತಿದ್ದಾರೆ. ಈ ಬಾರಿಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ಕುಟುಂಬ ರಾಜಕಾರಣವೇ ಎದ್ದು ಕಾಣುತ್ತಿದ್ದು, ಹೊಸ ಮುಖಗಳ ಪ್ರವೇಶಕ್ಕೆ ಅಡ್ಡಿ ತಂದಿದೆ.
ಬೈಲಹೊಂಗಲ ಮತ್ತು ಚನ್ನಮ್ಮನ ಕಿತ್ತೂರು, ಹುಕ್ಕೇರಿ, ಚಿಕ್ಕೋಡಿ-ಸದಲಗಾ, ಸವದತ್ತಿ, ರಾಮದುರ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣವಿದ್ದರೆ, ಗೋಕಾಕ್, ಅರಬಾವಿ, ಯಮಕನಮರಡಿ, ಅಥಣಿ, ಕಾಗವಾಡ, ರಾಯಬಾಗ, ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಅಭ್ಯರ್ಥಿ ಮೂರಕ್ಕೂ ಹೆಚ್ಚು ಬಾರಿ ಸ್ಪರ್ಧೆ ಬಯಸುತ್ತಿದ್ದಾರೆ.
ಜಾರಕಿಹೊಳಿ ಕುಟುಂಬದ ಪ್ರಾಬಲ್ಯ!
ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಜಾರಕಿಹೊಳಿ ಕುಟುಂಬದ ರಾಜಕಾರಣ ಹೆಚ್ಚು ಗಮನ ಸೆಳೆಯುತ್ತಿದ್ದು, ಹಾಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಮತ್ತೊಂದು ಸುತ್ತಿನ ಸ್ಪರ್ಧೆ ಸಿದ್ಧತೆಯಲ್ಲಿದ್ದಾರೆ. 1985ರ ಮೊದಲ ಚುನಾವಣೆಯಲ್ಲಿ ಕೇವಲ 4 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ಗೋಕಾಕ್ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಈಗ ಎಂಟನೇ ಬಾರಿ ಸ್ಪರ್ಧೆ ಪ್ರಯತ್ನದಲ್ಲಿದ್ದಾರೆ. 1972ರಿಂದ ಸತತ ಆರು ಬಾರಿ ಅರಬಾವಿ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ವಿಎಸ್ ಕೌಜಲಗಿ ಅವರನ್ನು 2004ರಲ್ಲಿ 19 ಸಾವಿರ ಮತಗಳ ಅಂತರದಿಂದ ಸೋಲಿಸಿ ಗೆದ್ದಿದ್ದ ಹಾಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಈವರೆಗೆ ಸೋಲು ಕಂಡಿಲ್ಲ. ಐದು ಬಾರಿ ಗೆದ್ದಿರುವ ಬಾಲಚಂದ್ರ ಈಗ ಆರನೇ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ನಡುವೆ, ರಾಯಬಾಗ ಹುಲಿ ಖ್ಯಾತಿಯ ವಿಎಲ್ ಪಾಟೀಲ್, ಪುತ್ರಿ ಪ್ರತಿಭಾ ಪಾಟೀಲ್, ಪುತ್ರ ವಿವೇಕರಾವ ಪಾಟೀಲ್ ಕೂಡ ಅರಬಾವಿ ಗೆಲ್ಲುವ ಪ್ರಯತ್ನ ಮಾಡಿದ್ದರು.
2008ರಿಂದ ಹೊಸ ಮೀಸಲು ಕ್ಷೇತ್ರವಾಗಿ ರಚನೆಯಾಗಿರುವ ಯಮಕನಮರಡಿಯನ್ನು ಸತತ ನಾಲ್ಕನೇ ಬಾರಿಗೆ ಗೆಲ್ಲುವ ತವಕದಲ್ಲಿ ಹಾಲಿ ಶಾಸಕ ಸತೀಶ್ ಜಾರಕಿಹೊಳಿ ಇದ್ದಾರೆ. 2008ಕ್ಕೂ ಮುಂಚೆ ಸತೀಶ್ ಜಾರಕಿಹೊಳಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. 2013, 2018ರಲ್ಲಿ ಸತೀಶ್ ಗೆಲುವಿನ ಓಟಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿದ್ದ ಬಿಜೆಪಿಯ ಮಾರುತಿ ಅಷ್ಠಗಿ ಈಗ ಮೂರನೇ ಬಾರಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ಕತ್ತಿ ಕುಟುಂಬ:
ಈಚೆಗೆ ಅಗಲಿದ ಮಾಜಿ ಸಚಿವ ಉಮೇಶ್ ಕತ್ತಿ 1985ರಲ್ಲಿ ಹುಕ್ಕೇರಿ ಮತಕ್ಷೇತ್ರದ ಶಾಸಕರಾಗಿದ್ದ ವಿಶ್ವನಾಥ ಕತ್ತಿ ನಿಧನಾನಂತರ ಒಂದು ಬಾರಿ ಸೋತು ಒಂಬತ್ತು ಬಾರಿ ಗೆದ್ದಿದ್ದರು. ಅವರಿಂದ ತೆರವಾಗಿರುವ ಕ್ಷೇತ್ರದಲ್ಲಿಈಗ ಪುತ್ರ ನಿಖಿಲ್ ಕತ್ತಿ ಮತ್ತು ಸಹೋದರ ರಮೇಶ್ ಕತ್ತಿ ಹೆಸರು ಓಡಾಡುತ್ತಿವೆ. ಕತ್ತಿ ಕುಟುಂಬ ರಾಜಕಾರಣಕ್ಕೆ ಪೆಟ್ಟು ಕೊಡಲು ಸಂಕೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದು ಸಚಿವರಾಗಿದ್ದ ಎಬಿ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆಯಾಗಿದೆ.
1985ರಿಂದ ಸತತವಾಗಿ ಮಾಮನಿ, ಕೌಜಲಗಿ ಕುಟುಂಬಗಳ ನಡುವೆಯೇ ಸುತ್ತು ಹೊಡೆಯುತ್ತಿರುವ ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಅಗಲಿದ ಆನಂದ ಮಾಮನಿ ಪತ್ನಿ ರತ್ನಾ ಮಾಮನಿ, ಮಾಜಿ ಶಾಸಕ ರಾಜಣ್ಣ ಮಾಮನಿ ಸಹೋದರ ವಿರೂಪಾಕ್ಷ ಮಾಮನಿ ಹೆಸರು ಬಿಜೆಪಿ ಪಾಳಯದಲ್ಲಿ ಮುಂಚೂಣಿಯಲ್ಲಿವೆ. ಕಾಂಗ್ರೆಸ್ನಿಂದ ಹೊಸ ಮುಖಗಳು ಕುಟುಂಬ ರಾಜಕಾರಣಕ್ಕೆ ಸೆಡ್ಡು ಹೊಡಯುವ ಪ್ರಯತ್ನ ಮಾಡುತ್ತಿವೆ.
20018, 2013ರಲ್ಲಿ ರಾಮದುರ್ಗ ಗೆದ್ದಿದ್ದ ಅಶೋಕ್ ಪಟ್ಟಣ ಅವರ ತಂದೆ ಮಹಾದೇವಪ್ಪ ಪಟ್ಟಣ 1957ರಲ್ಲಿ ಮತ್ತು ತಾಯಿ ಶಾರದಮ್ಮ ಪಟ್ಟಣ 1967ರಲ್ಲಿ ಶಾಸಕರಾಗಿದ್ದರು. ಐದು ಬಾರಿ ಸ್ಪರ್ಧಿಸಿ ಎರಡು ಬಾರಿ ಗೆದ್ದಿರುವ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಮತ್ತು ಮಾಜಿ ಶಾಸಕ ಅಶೋಕ್ ಪಟ್ಟಣ ಇಬ್ಬರೂ ಈಗ ರಾಮದುರ್ಗ ಚುನಾವಣಾ ರೇಸ್ ಸಿದ್ಧತೆಯಲ್ಲಿದ್ದಾರೆ. ಐದು ಬಾರಿ ಗೆದ್ದು ಈಗ ವಿಧಾನ ಪರಿಷತ್ ಪ್ರವೇಶಿಸಿರುವ ಪ್ರಕಾಶ್ ಹುಕ್ಕೇರಿ ಪ್ರತಿನಿಧಿಸುವ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಪುತ್ರ ಗಣೇಶ್ ಹುಕ್ಕೇರಿ ಮೂರನೇ ಗೆಲುವಿಗಾಗಿ ಕಾದಿದ್ದಾರೆ. ಏಳು ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಗೆದ್ದಿರುವ ಕಾಗವಾಡ ಕ್ಷೇತ್ರದ ಮಾಜಿ ಶಾಸಕ ಭರಮಗೌಡ ಕಾಗೆ ಈಗ ಕಾಂಗ್ರೆಸ್ ಅಭ್ಯರ್ಥಿ.
ಕರ್ನಾಟಕದ ಕುರುಕ್ಷೇತ್ರ ಗೆಲ್ಲೋರು ಯಾರು..?, ಎಬಿಪಿ-ಸಿ-ವೋಟರ್ ಸಮೀಕ್ಷೆಯಲ್ಲಿ ಯಾರಿಗೆ ಬಹುಮತ ಗೊತ್ತಾ..?
ಹಿರೇಬಾಗೇವಾಡಿ ಕ್ಷೇತ್ರದಲ್ಲೊಮ್ಮೆ ಗೆದ್ದು ನಂತರ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿರುವ ಹಾಲಿ ಶಾಸಕ ಅಭಯ ಪಾಟೀಲ್ ಐದನೇ ಪ್ರಯತ್ನದಲ್ಲಿದ್ದಾರೆ. ಸತತ ಮೂರು ಗೆಲುವು ಕಂಡಿರುವ ರಾಯಭಾಗ ಹಾಲಿ ಶಾಸಕ ದುರ್ಯೋಧನ ಐಹೊಳೆ ನಾಲ್ಕನೇ ಗೆಲುವಿಗಾಗಿ ಕಾಯುತ್ತಿದ್ದಾರೆ. ಮೂರು ಬಾರಿ ಗೆದ್ದು ಒಂದು ಸೋಲು ಕಂಡಿರುವ ಹಾಲಿ ವಿಧಾನಪರಿಷ್ ಸದಸ್ಯ ಲಕ್ಷ್ಮಣ್ ಸವದಿ ಮತ್ತೆ ಶಾಸಕ ಸ್ಥಾನಕ್ಕೇರುವ ತಯಾರಿ ನಡೆಸುತ್ತಿದ್ದರೆ, ಎರಡು ಬಾರಿ ಗೆದ್ದಿರುವ ಮಹೇಶ್ ಕುಮಟಳ್ಳಿ ಸವದಿಗೆ ಸ್ಥಾನ ಬಿಟ್ಟುಕೊಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು, ಎರಡು ಬಾರಿ ಗೆದ್ದಿರುವ ಕುಡಚಿ ಪಿ ರಾಜೀವ್, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ನಾಲ್ಕನೇ ಬಾರಿ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಒಂದು ಬಾರಿ ಸೋತು ಗೆದ್ದಿರುವ ಲಕ್ಷ್ಮೀ ಹೆಬ್ಬಾಳ್ಕರ್ಗೆ ಎರಡು ಬಾರಿ ಗೆದ್ದು ಒಂದು ಬಾರಿ ಸೋತಿರುವ ಸಂಜಯ ಪಾಟೀಲ್ ಮತ್ತೆ ಎದುರಾಗುವ ಸಿದ್ಧತೆಯಲ್ಲಿದ್ದಾರೆ. ಬೆಳಗಾವಿ ಉತ್ತರದಲ್ಲೂಎರಡು ಬಾರಿ ಶಾಸಕರಾಗಿದ್ದ ಫಿರೋಜ್ ಸೇಠ್ ಮೂರನೇ ಪ್ರಯತ್ನದಲ್ಲಿದ್ದಾರೆ.
10ನೇ ಬಾರಿ ಸ್ಪರ್ಧೆಯತ್ತ!
1972ರಲ್ಲಿತಂದೆ ಬಿ.ಡಿ.ಇನಾಮದಾರ ಗೆದ್ದಿದ್ದ ಚನ್ನಮ್ಮನ ಕಿತ್ತೂರು ಮತಕ್ಷೇತ್ರದಲ್ಲಿಒಂಬತ್ತು ಬಾರಿ ಸ್ಪರ್ಧಿಸಿ ಐದು ಬಾರಿ ಗೆದ್ದಿರುವ ಪುತ್ರ ಡಿ.ಬಿ.ಇನಾಮದಾರ ಈಗ ಹತ್ತನೇ ಬಾರಿ ಟಿಕೆಟ್ ಪ್ರಯತ್ನದಲ್ಲಿದ್ದಾರೆ. ಆದರೆ, ಸದ್ಯ ಅನಾರೋಗ್ಯಕ್ಕೆ ತುತ್ತಾಗಿರುವ ಅವರ ಬದಲಿಗೆ ಸೊಸೆ ಲಕ್ಷ್ಮೀ ಇನಾಮದಾರಗೆ ಕಾಂಗ್ರೆಸ್ ಟಿಕೆಟ್ ಕೇಳಲಾಗುತ್ತಿದೆ. 1985ರಲ್ಲಿ ತಂದೆ ಬಿ.ಬಿ.ದೊಡ್ಡಗೌಡರನ್ನು ಸೋಲಿಸಿದ್ದ ಡಿ.ಬಿ.ಇನಾಮದಾರ ವಿರುದ್ಧ 2018ರಲ್ಲಿ ಗೆದ್ದು ಬೀಗಿದ್ದ ಮಹಾಂತೇಶ್ ದೊಡಗೌಡರ 2023ರಲ್ಲೂಕುಟುಂಬ ರಾಜಕಾರಣ ಮುನ್ನಡೆಸುವ ತವಕದಲ್ಲಿದ್ದಾರೆ.
ಹೊಸಬರಿಗಿಲ್ಲಅವಕಾಶ!
ಕೌಜಲಗಿ, ಪಾಟೀಲ್ ಮತ್ತು ಮೆಟಗುಡ್ ಕುಟುಂಬಗಳ ನಡುವೆಯೇ ಸುಳಿದಾಡುತ್ತಿರುವ ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ರಾಜಕಾರಣದಲ್ಲಿ ಹೊಸಬರಿಗೆ ಅವಕಾಶಗಳೇ ಸಿಗುತ್ತಿಲ್ಲ. ನಾಲ್ಕು ಬಾರಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿರುವ ಹಾಲಿ ಶಾಸಕ ಮಹಾಂತೇಶ್ ಕೌಜಲಗಿ ಅವರ ತಂದೆ ಶಿವಾನಂದ ಕೌಜಲಗಿ ಕೂಡ 1985 ರಿಂದ 1994ರ ವರೆಗೆ ಮೂರು ಬಾರಿ ಶಾಸಕರಾಗಿ ಸಚಿವರಾಗಿದ್ದರು. ಇದಕ್ಕೂ ಮುಂಚೆ 1972ರಲ್ಲಿ ಪಿ.ಬಿ.ಪಾಟೀಲ್ ಶಾಸಕರಾಗಿದ್ದರೆ, 2013ರಲ್ಲಿಅವರ ಸಹೋದರನ ಪುತ್ರ ಡಾ.ವಿ.ಐ.ಪಾಟೀಲ್ ಗೆದ್ದಿದ್ದರು. ನಾಲ್ಕು ಬಾರಿ ಸ್ಪರ್ಧಿಸಿದ್ದ ಜಗದೀಶ ಮೆಟಗುಡ್ ಕೂಡ ಎರಡು ಸಲ ಗೆದ್ದಿದ್ದಾರೆ. ಈಗ ಮತ್ತೆ ಮಹಾಂತೇಶ್ ಕೌಜಲಗಿ ಸ್ಪರ್ಧೆ ಖಚಿತವಾಗಿದ್ದರೆ, ಬಿಜೆಪಿಯ ಜಗದೀಶ ಮೆಟಗುಡ್, ಡಾ.ವಿ.ಐ.ಪಾಟೀಲ್ ಅವಕಾಶದ ದಾರಿ ಕಾಯುತ್ತಿದ್ದಾರೆ.