ಚಿತ್ರದುರ್ಗ: ಈಜಲು ತೆರಳಿದ್ದ ಐವರು ಯುವಕರಲ್ಲಿ ಮೂವರು ನೀರುಪಾಲಾದ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ನಂದನಹೊಸೂರು ಗ್ರಾಮದ ಕೆರೆಯಲ್ಲಿ ಈ ಅವಘಡ ಸಂಭವಿಸಿದೆ. ಇನ್ನು ಯುವಕರು ಪಿಯುಸಿ ಪರಿಕ್ಷೆ ಮುಗಿಸಿ ಗ್ರಾಮಗಳಿಗೆ ಬಂದಿದ್ದರು ಎನ್ನಲಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊರಕೆದೇವಪುರ ಗ್ರಾಮದ ಸಂಜಯ್ (18), ನಂದನ ಹೊಸೂರು ಗೊಲ್ಲರಹಟ್ಟಿಯ ಗಿರೀಶ್ (18) ಮತ್ತು ಕಣಿವೆಜೋಗಿಹಳ್ಳಿಯ ಮನು (17), ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ.
ಯುವಕರು ಗ್ರಾಮದ ಗುಂಡಿಕೆರೆಯಲ್ಲಿ ಈಜಲು ತೆರಳಿದ್ದಾರೆ. ಆದರೆ ಕೆರೆ ತುಂಬಾ ಆಳ ಇದ್ದ ಕಾರಣ ದಡ ಸೇರಲು ಸಾಧ್ಯವಾಗಿಲ್ಲ ಎಂದು ಅಂದಾಜಿಸಲಾಗಿದೆ.
ಪೋಲಿಸ್ ಇಲಾಖೆ ಮತ್ತು ಆಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಕೆರೆಯಿಂದ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.
ವಿಷಯ ತಿಳಿದ ತಕ್ಷಣ ಅಕ್ಕಪಕ್ಕದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇನ್ನು ಮೃತ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಮುಂದುವರೆಸಿದ್ದಾರೆ.