ಕೂಗು ನಿಮ್ಮದು ಧ್ವನಿ ನಮ್ಮದು

ಕೊನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಹಳೇ ಗಂಡನ ಪಾದವೇ ಗತಿ ಆಗಿದೆ: ಪ್ರತಾಪ್‌ ಸಿಂಹ

ಮೈಸೂರು: ಊರಿಗೊಬ್ಬಳೇ ನಾನೇ ಪದ್ಮಾವತಿ ಎಂಬ ರೀತಿಯಲ್ಲಿ ಸಿದ್ದರಾಮಯ್ಯ ಓಡಾಡುತ್ತಿದ್ದರು. ಈಗ ಕೊನೆಗೆ ಹಳೆ ಗಂಡನ ಪಾದವೇ ಗತಿ ಎಂಬಂತೆ ವರುಣಾಗೆ ಬಂದಿದ್ದಾರೆ ಎಂದು ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. ಈ ಮೂಲಕ ಕೊನೆಗೆ ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ನಾಯಕ ನಾನೇ, ಮುಂದಿನ ಮುಖ್ಯಮಂತ್ರಿ ನಾನೇ ಎನ್ನುವ ಸಿದ್ದರಾಮಯ್ಯ ಅವರಿಗೆ ಒಂದು ಕ್ಷೇತ್ರ ಹುಡುಕಿಕೊಳ್ಳಲು ಆಗಲಿಲ್ಲ. ಮಗನ ನೆಲೆ ಕಳೆದು ವರುಣಾಗೆ ಬರುವ ಸ್ಥಿತಿ ಸಿದ್ದರಾಮಯ್ಯಗೆ ಬಂತು ಎಂದರು.

ಸಿದ್ದರಾಮಯ್ಯ ಪುಕ್ಕಲತನದಿಂದ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕಳೆದ ಬಾರಿ ಸಣ್ಣ ಅಂತರದಿಂದ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿನಿಂದ ಎಸ್ಕೇಪ್‌ ಆಗಿದ್ದರು. ಸಿದ್ದರಾಮಯ್ಯ ಈ ಬಾರಿ ಎಲ್ಲೇ ನಿಂತರು ಸೋಲುತ್ತಾರೆ ಎಂದು ಸಂಸದ ಪ್ರತಾಪ್‌ ಸಿಂಹ ಭವಿಷ್ಯ ನುಡಿದರು. ಹೈಕಮಾಂಡ್ ಟಿಕೆಟ್ ಕೊಟ್ಟರೆ ನಾನು ಕೋಲಾರದಲ್ಲಿ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕ್ಷೇತ್ರ ಕೊಡಲು ಹೈಕಮಾಂಡ್ ರೆಡಿ ಇಲ್ಲ ಎಂದ ಮೇಲೆ ಯಾವ ಧೈರ್ಯದ ಮೇಲೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಸಿದ್ದರಾಮಯ್ಯ ಹೇಳುತ್ತಾರೆ? ಟಿಕೆಟ್ ಕೊಡದೆ ಇರುವ ಪಕ್ಷ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡುತ್ತಾ? 2018ರಲ್ಲಿಯೇ ಸಿದ್ದರಾಮಯ್ಯ ರಾಜಕೀಯ ಮುಗಿದು ಹೋಗಿದೆ ಎಂದು ಕಿಡಿಕಾರಿದರು.

8 ಕ್ಷೇತ್ರ ಬಿಟ್ಟು ಒಂದು ಕ್ಷೇತ್ರಕ್ಕೆ ಬರುವಷ್ಟು ದಡ್ಡ ನಾನಲ್ಲ!
ಪ್ರತಾಪ್ ಸಿಂಹ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, 2029ರವರೆಗೂ ಮೋದಿ ಅವರ ಆಡಳಿತದಲ್ಲಿ ಸಂಸದನಾಗಿ ಕೆಲಸ ಮಾಡುತ್ತೇನೆ. ಎಂಟು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಸಂಸದನ ಸ್ಥಾನ ಬಿಟ್ಟು ಒಂದು ವಿಧಾನಸಭಾ ಕ್ಷೇತ್ರ ಹುಡುಕಿಕೊಳ್ಳುವಷ್ಟು ದಡ್ಡ ನಾನಲ್ಲ ಎಂದು ಹೇಳಿದರು. ಮೀಸಲಾತಿ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಂಘ ಪರಿವಾರದವರು ಮೀಸಲಾತಿ ತೆಗೆದುಹಾಕುತ್ತಾರೆ ಎಂದು ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದರು. ಬಿಜೆಪಿ ಹಿಂದುಳಿದ ಜಾತಿ ಜನಾಂಗದ ಪರವಾಗಿದ್ದೇವೆ. ನಾವು ಕೇವಲ ಭಾಷಣ ಮಾಡುವುದಲ್ಲ. ಎಲ್ಲಾ ಸಮುದಾಯದ ಬೇಡಿಕೆಗಳನ್ನು ಸ್ಪಂದಿಸುವ ಕೆಲಸ ಮಾಡಿದ್ದೇವೆ. ಎಲ್ಲಾ ಸಮುದಾಯದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪ್ರತಾಪ್‌ ಸಿಂಹ ಹೇಳಿದರು

error: Content is protected !!