ಚಾಮರಾಜನಗರ: ಮಗಳ ಮೃತದೇಹದ ಎದುರು ಆಕ್ರಂಧನ ವ್ಯಕ್ತಪಡಿಸುತ್ತಿರುವ ಮೃತ ಶಾಲಿನಿ (22) ತಂದೆ ಶಾಂತಪ್ಪ ಮತ್ತು ಚಿಕ್ಕಮ್ಮ ಚಿನ್ನಮ್ಮ. ಮರಣೋತ್ತರ ಪರೀಕ್ಷೆ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ, ಶವ ಪರೀಕ್ಷೆಗೆ ಅನುವು ಮಾಡಿಕೊಡಿ ಎನ್ನುತ್ತಿರುವ ಪೊಲೀಸರು. ಇದೆಲ್ಲ ಕಂಡುಬಂದಿದ್ದು ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ. ಕಳೆದ ಒಂಬತ್ತು ತಿಂಗಳ ಹಿಂದೆ ಮಾದಾಪಟ್ಟಣ ಗ್ರಾಮದ ಶಾಲಿನಿ ಅವರನ್ನ ಮೂಡ್ನಾಕೂಡು ಗ್ರಾಮದ ಮಹೇಶ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಸರಳ ಮದುವೆ ಮಾಡಿಕೊಟ್ಟಿದ್ದ ಶಾಂತಪ್ಪ 50 ಸಾವಿರ ರೂಪಾಯಿ ವರದಕ್ಷಿಣೆ ಸಹ ನೀಡಿದ್ದನಂತೆ. ಆದರೆ ಪತಿ ಮಹೇಶ್ ಹಾಗೂ ಆತನ ಪೋಷಕರು ಶಾಲಿನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಂತೆ. ಈ ವಿಚಾರವಾಗಿ ಆಗಾಗ ಗಲಾಟೆಯಾಗಿ ಶಾಲಿನಿ ತವರು ಮನೆಗೆ ಹೋಗಿದ್ದಳಂತೆ. ಆದರೆ ಶನಿವಾರ ಬೆಳಗ್ಗೆ ಗ್ರಾಮದ ತಮ್ಮದೇ ಜಮೀನಿನ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿದ್ದು ಗಂಡನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಇನ್ನು ಶಾಲಿನಿ ಮೃತದೇಹ ಬಾವಿಯಲ್ಲಿ ತೇಲಾಡುತ್ತಿರುವುದನ್ನ ಕಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ತವರು ಮನೆಯವರು ಬಂದು ಮಹೇಶ್ ಹಾಗೂ ಆತನ ಪಾಲಕರನ್ನ ಬಂಧಿಸಬೇಕು ಎಂದು ಒತ್ತಾಯಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನ ತಡೆಯಲು ಪೊಲೀಸರು ಆರೋಪಿ ಮಹೇಶ್ನನ್ನ ಬಂಧಿಸಿದ್ದಾರೆ. ಆದರೆ ಆತನ ತಂದೆ ತಾಯಿಯನ್ನ ವಶಕ್ಕೆ ಪಡೆಯಲಿಲ್ಲ. ಹೀಗಾಗಿ ಶಾಲಿನಿ ಕುಟುಂಬಸ್ಥರು ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ.
ಪೊಲೀಸರು ಸಹ ಆರೋಪಿಗಳ ಜೊತೆ ಶಾಮೀಲಾಗಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪರಿಸ್ಥಿತಿ ವಿಷಮ ಸ್ಥಿತಿಗೆ ತಲುಪುತ್ತಿರುವುದನ್ನು ಅರಿತ ಡಿವೈಎಸ್ಪಿ ಪ್ರಿಯದರ್ಶಿನಿ, ತಹಸೀಲ್ದಾರ್ ಬಸವರಾಜ್ ಸ್ಥಳಕ್ಕಾಗಮಿಸಿ ಮರಣೋತ್ತರ ಪರೀಕ್ಷೆಗೆ ಅನುವು ಮಾಡಿಕೊಡಿ ಎಂದರು. ಆದರೆ ಗ್ರಾಮದವರು ಮಾತ್ರ ಯಾವ ಕಾರಣಕ್ಕೂ ತಪ್ಪಿತಸ್ಥರ ಬಂಧನದವರೆಗೆ ಶವ ಕೊಡಲ್ಲ ಎಂದು ಪಟ್ಟು ಹಿಡಿದರು. ಹೀಗೆ ಅರ್ಧ ಗಂಟೆ ಚರ್ಚೆ ಬಳಿಕ ಪೊಲೀಸರಿಗೆ ಶವ ಒಪ್ಪಿಸಲಾಯಿತು. ಪೊಲೀಸರು ನ್ಯಾಯ ದೊರಕಿಸಿಕೊಡಲಿ ಎನ್ನುತ್ತಾರೆ ಮೃತಳ ಸಂಬಂಧಿಕರು.
ಶಾಲಿನಿ ಅವರದ್ದು ಕೊಲೆಯೋ ಆತ್ಮಹತ್ಯೆಯೋ ಎಂಬುದು ಪೋಸ್ಟ್ ಮಾರ್ಟಂ ರಿಪೋರ್ಟ್ ಬಳಿಕವೇ ಗೊತ್ತಾಗಲಿದೆ. ಆದರೆ ಈಗಷ್ಟೇ ನವ ಜೀವನ ಆರಂಭಿಸಬೇಕಿದ್ದಾಕೆ ಬಾರದ ಲೋಕಕ್ಕೆ ತೆರಳಿರುವುದು ದುರಂತವೇ ಸರಿ. ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಯಾವುದೇ ಮರ್ಜಿಗೆ ಒಳಗಾಗದೆ ಪ್ರಾಮಾಣಿಕ ತನಿಖೆ ನಡೆಸಲಿ ಎಂಬುದೇ ನಮ್ಮ ಆಶಯ.