ಎಸ್ಎಸ್ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದಿಂದ ಇಡೀ ಭಾರತಕ್ಕೆ ಹೆಮ್ಮೆ ಆಗಿದೆ ಎಂಬುದು ನಿಜ. ಯಾಕೆಂದರೆ, ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದೆ. ಭಾರತದ ಹಾಡಿಗೆ ಆಸ್ಕರ್ ಸಿಕ್ಕಿದ್ದು ಇದೇ ಮೊದಲು. ಹಾಗಾಗಿ ಎಲ್ಲರೂ ಈ ಖುಷಿಯನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಆದರೆ ಅದರ ನಡುವೆ ಕೆಲವು ಗಾಸಿಪ್ಗಳು ಕೂಡ ಹಬ್ಬಿವೆ. ಅಕಾಡೆಮಿ ಅವಾರ್ಡ್ ಪಡೆಯಲು ರಾಜಮೌಳಿ ಅವರು 80 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಆ ಬಗ್ಗೆ ‘ಆರ್ಆರ್ಆರ್’ ಸಿನಿಮಾ ನಿರ್ಮಾಪಕ ಡಿವಿವಿ ದಾನಯ್ಯ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಅವರ ಹೇಳಿಕೆಯಿಂದ ಗಾಸಿಪ್ ಮಂದಿಗೆ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಆದರೂ ಕೂಡ ರಾಜಮೌಳಿ ಕಡೆಯಿಂದ ಪ್ರತಿಕ್ರಿಯೆ ಬರಲಿ ಎಂದು ನಿರೀಕ್ಷಿಸಲಾಗುತ್ತಿದೆ. ಡಿವಿವಿ ದಾನಯ್ಯ ಅವರು ‘ಆರ್ಆರ್ಆರ್’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಆದರೆ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅವರು ಕಾಣಸಿಕೊಳ್ಳಲೇ ಇಲ್ಲ. ಅಷ್ಟೇ ಅಲ್ಲದೇ, ವಿದೇಶದಲ್ಲಿ ನಡೆದ ಅನೇಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲೂ ಅವರು ಭಾಗಿ ಆಗಲಿಲ್ಲ. ಹಾಗಾಗಿ ‘ಆರ್ಆರ್ಆರ್’ ತಂಡದಲ್ಲಿ ವೈಮನಸ್ಸು ಇದೆ ಎಂದು ಎಲ್ಲರೂ ಮಾತನಾಡಿಕೊಳ್ಳಲು ಆರಂಭಿಸಿದರು. ಆದರೆ ಈಗ ಡಿವಿವಿ ದಾನಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡಿವಿವಿ ದಾನಯ್ಯ ಅವರು ಆಸ್ಕರ್ ಪ್ರಶಸ್ತಿ ಕುರಿತು ಮಾತನಾಡಿದ್ದಾರೆ. ‘ಆಸ್ಕರ್ ಕ್ಯಾಂಪೇನ್ಗಾಗಿ ದುಡ್ಡು ಖರ್ಚು ಮಾಡಲಾಯಿತು ಎಂಬ ಸುದ್ದಿಯನ್ನು ನಾನು ಕೇಳಿದ್ದೇನೆ. ಆದರೆ ನಾನು ಯಾವುದೇ ಹಣ ನೀಡಿಲ್ಲ. ಅಲ್ಲಿ ನಿಜಕ್ಕೂ ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ಒಂದು ಪ್ರಶಸ್ತಿಗಾಗಿ ಯಾರೂ ಕೂಡ 80 ಕೋಟಿ ರೂಪಾಯಿ ಖರ್ಚು ಮಾಡುವುದಿಲ್ಲ. ಅದರಿಂದ ಯಾವುದೇ ಲಾಭ ಇಲ್ಲ’ ಎಂದು ಡಿವಿವಿ ದಾನಯ್ಯ ಹೇಳಿದ್ದಾರೆ.
ರಾಜಮೌಳಿ ಜೊತೆ ದಾನಯ್ಯ ಮನಸ್ತಾಪ ಮಾಡಿಕೊಂಡಿದ್ದಾರೆ ಎಂಬ ವದಂತಿ ಕೂಡ ಇದೆ. ಹಾಗಿದ್ದರೂ ಕೂಡ ರಾಜಮೌಳಿ ಬಗ್ಗೆ ದಾನಯ್ಯ ಅವರು ಒಳ್ಳೆಯ ಮಾತುಗಳನ್ನಾಡಿದ್ದಾರೆ. ‘ಆರ್ಆರ್ಆರ್’ ಸಿನಿಮಾವನ್ನು ನಿರ್ಮಾಣ ಮಾಡಲು ಅವಕಾಶ ನೀಡಿದ ರಾಜಮೌಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಈ ಚಿತ್ರವನ್ನು ನಿರ್ಮಿಸಿದ್ದು ತಾವೇ ಎಂದು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ ಅಂತ ಅವರು ಹೆಮ್ಮೆಯಿಂದ ಹೇಳಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ದಾನಯ್ಯ ಅವರು ಪವನ್ ಕಲ್ಯಾಣ್ ನಟನೆಯ ಹೊಸ ಚಿತ್ರಕ್ಕೆ ಈಗ ಬಂಡವಾಳ ಹೂಡುತ್ತಿದ್ದಾರೆ.