ಕೂಗು ನಿಮ್ಮದು ಧ್ವನಿ ನಮ್ಮದು

ರಾಯಚೂರಿನಲ್ಲಿ ಕೊರೋನಾ ಅಟ್ಟಹಾಸ: ಸಾವಿರ ಸನಿಹಕ್ಕೆ ಬಂದ ಸೋಂಕಿತರ ಸಂಖ್ಯೆ

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದೆ. ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಕೊರೋನಾ ಸೋಂಕಿತರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಬರೋಬ್ಬರಿ 948 ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಸಾವಿರ ಸನಿಹಕ್ಕೆ ಬಂದು ನಿಂತಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಈಗಾಗಲೇ ಕೊರೋನಾಗೆ 13 ಜನರು ಬಲಿಯಾಗಿದ್ದಾರೆ. ಪ್ರಾರಂಭದಲ್ಲಿ ಮಹಾರಾಷ್ಟ್ರದಿಂದ ಬಂದವರಲ್ಲಿ ಮಾತ್ರ ಸೋಂಕು ಪತ್ತೆಯಾಗಿತ್ತು. ಆದ್ರೆ ನಿಧಾನಕ್ಕೆ ಸೋಂಕು ಸಮುದಾಯದ ಮಟ್ಟದಲ್ಲಿ ಹರಡಿದ್ದು, ಇಡೀ ಜಿಲ್ಲೆಯಾದ್ಯಂತ ಸೋಂಕಿನ ತೀವ್ರತೆ ಕಂಡು ಬರುತ್ತಿದೆ. ರಾಯಚೂರು ಹಾಗೂ ಸಿಂಧನೂರು ನಗರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕಂಡುಬರ್ತಿರೋದ್ರಿಂದ ಎರಡೂ ನಗರಗಳನ್ನ ಒಂದು ವಾರ ಲಾಕ್ ಡೌನ್ ಮಾಡಲಾಗಿದೆ. ಉಳಿದಂತೆ ಇಡೀ ಜಿಲ್ಲೆಯಾದ್ಯಂತ ಬೆಳಗ್ಗೆ 6 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡಲಾಗಿದೆ.
ಸದ್ಯ ಜಿಲ್ಲೆಯಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದ, ಐಎಲ್ಐ ಹಾಗೂ ಸಾರಿ ಪ್ರಕರಣಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಬಹುತೇಕ ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫೀವರ್ ಕ್ಲೀನಿಕ್ ಪ್ರಾರಂಭ ಮಾಡಲಾಗಿದ್ದು, ಅಲ್ಲಿಂದಲೇ ಸೋಂಕಿತರು ಪತ್ತೆಯಾಗ್ತಿದ್ದಾರೆ. ಸದ್ಯ ಗ್ರಾಮೀಣ ಭಾಗಕ್ಕೂ ಕೊರೋನಾ ಕಾಲಿಟ್ಟಿರುವುದರಿಂದ ಇಡೀ ಜಿಲ್ಲೆಯಲ್ಲಿ ಜನರು ಬೆಚ್ಚಿ ಬಿದ್ದಿದ್ದಾರೆ. ಹಾಗಾಗಿ ಜಿಲ್ಲೆಯ ಜನರು ಕೊರೋನಾದಿಂದ ದೂರ ಇರಲು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ.

error: Content is protected !!