ಕಲಬುರಗಿ: ಬಿಜೆಪಿಯ ವಿಜಯ ಸಂಕಲ್ಪ ಭಾಗವಾಗಿ ಕಲಬುರಗಿ ಜಿಲ್ಲೆಯ ಪ್ರವಾಸದಲ್ಲಿರುವ ಶಾಸಕ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ನಗರದ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದರು ಮತ್ತು ಒಂದೆರಡು ಸಲ ಇಕ್ಕಟ್ಟಿಗೂ ಸಿಕ್ಕರು. ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ನೀಡಿರುವ ಕೊಡುಗೆಯೇನು, ಕೇವಲ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿದರೆ, ಪ್ರದೇಶದ ಸಮಸ್ಯೆಗಳು ನೀಗುತ್ತವೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ರವಿ ಮಾತು ಬದಲಾಯಿಸುವ ಪ್ರಯತ್ನ ಮಾಡಿದರು.
ಕೆಲ ಜನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿದ ನಂತರ ಸಾಕಷ್ಟು ಬದಲಾವಣೆಗಳಾಗಿವೆ, ರಸ್ತೆಗಳ ಗುಣಮಟ್ಟ ಸುಧಾರಿಸಿದೆ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುತ್ತಿದೆ ಅಂತ ಹೇಳುತ್ತಿದ್ದಾರೆ ಅಂತ ರವಿಯವರು ಹೇಳಿದಾಗ ಪ್ರತಿನಿಧಿಗಳು ಮತ್ತಷ್ಟು ಪ್ರಶ್ನೆಗಳ ಸುರಿಮಳೆಗೈದರು. ಆಗ ತಬ್ಬಿಬ್ಬಾದ ಶಾಸಕರು ಉತ್ತರಿಸಲು ತಡವರಿಸಿದರು.