ಬೆಳಗಾವಿ: ಪ್ರೌಢ ಶಾಲೆ ಮಂಜೂರಾತಿಗಾಗಿ ಕುಕಡೊಳ್ಳಿ ಗ್ರಾಮದ ಯುವಕರಿಂದ ಸಿಎಂ ಬೊಮ್ಮಾಯಿ, ಶಿಕ್ಷಣ ಸಚಿವರು ಸೇರಿ ರಾಜ್ಯಪಾಲರಿಗೆ ರಕ್ತದಲ್ಲಿ ಪತ್ರ ಬರೆದಿರುವ ಘಟನೆ ನಡೆದಿದೆ. ಹಲವು ಬಾರಿ ಪ್ರೌಢ ಶಾಲೆಯ ನಿರ್ಮಾಣಕ್ಕಾಗಿ ಗ್ರಾಮದ ಯುವಕರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮದ ಹತ್ತಾರು ಯುವಕರು ಸೇರಿ ಸಿಎಂ ಬೊಮ್ಮಾಯಿ, ಶಿಕ್ಷಣ ಸಚಿವರು ಸೇರಿ ರಾಜ್ಯಪಾಲರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಇನ್ನು ಇದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರವಾಗಿದ್ದು, ಅದು ಅಲ್ಲದೇ ವಿಧಾನ ಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಈ ಜಿದ್ದಾಜಿದ್ದಿನ ನಡುವೆಯೇ ಯುವಕರು ರಕ್ತದಲ್ಲಿ ಬರೆದ ಪತ್ರ ಇದೀಗ ವೈರಲ್ ಆಗಿದ್ದು, ಬೇಡಿಕೆ ಈಡೇರಿಸದ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಡಿಸಿದ್ದಾರೆ. ಚುನಾವಣಾ ಸಂದರ್ಭ ಆಗಿರುವುದರಿಂದ ಈ ಬಾರಿ ಮತ್ತೊಮ್ಮೆ ಹೇಗಾದರೂ ಮಾಡಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಚುಕ್ಕಾಣಿ ಹಿಡಿಯಲು ಲಕ್ಷ್ಮೀ ಹೆಬ್ಬಾಳ್ಕರ್ ಹರಸಾಹಸ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇಂತಹ ಘಟನೆಗಳು ಅವರ ಗೆಲುವಿಗೆ ಸಂಕಷ್ಟಕ್ಕೆ ತರುವ ಹಾಗೇ ಮಾಡಿದೆ.