ಬೆಂಗಳೂರು: ಹೆಚ್ಚಿನ ಲಗೇಜ್ನ ಶುಲ್ಕವನ್ನು ಪಾವತಿಸಲಾಗದೆ ಮಲೇಷ್ಯಾಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬರು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತಮ್ಮ ಬಟ್ಟೆ ಮತ್ತು ಆಹಾರದ ಪ್ಯಾಕಿಂಗ್ ವಸ್ತುಗಳನ್ನು ಬಿಟ್ಟು ಹೋಗುವಂತಾಗಿದೆ. ಹೆಚ್ಚುವರಿ ಲಗೇಜ್ ಶುಲ್ಕವಾಗಿ ಪ್ರತಿ ಕೆಜಿಗೆ 2,000 ರೂಪಾಯಿ ನೀಡುವಂತೆ ಏರ್ಏಷ್ಯಾ ಗ್ರೌಂಡ್ ಸಿಬ್ಬಂದಿ ವಿದ್ಯಾರ್ಥಿಗೆ ತಿಳಿಸಿದ್ದಾರೆ. ಆದ್ರೆ ಏರ್ಏಷ್ಯಾದ ಅಧಿಕೃತ ಪೋರ್ಟಲ್ನಲ್ಲಿ ಪ್ರತಿ ಕೆಜಿಗೆ 500 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಎಂದು ಪ್ರಯಾಣಿಕ ಹೇಳಿದ್ದಾನೆ. ಆಗ ಏರ್ಏಷ್ಯಾ ಗ್ರೌಂಡ್ ಸಿಬ್ಬಂದಿ, ನೀವು ತಪ್ಪು ವೆಬ್ಸೈಟ್ಗೆ ಹೋಗಿ ಮಾಹಿತಿ ಪಡೆದಿದ್ದೀರಿ. ಲಗೇಜ್ ಶುಲ್ಕವಾಗಿ ಪ್ರತಿ ಕೆಜಿಗೆ 2,000 ರೂಪಾಯಿ ಕಟ್ಟಿ ಎಂದಿದ್ದಾರೆ. ಹಣ ಕಟ್ಟಲಾಗದೆ ವಿದ್ಯಾರ್ಥಿ ತನ್ನ ಕೆಲ ಬಟ್ಟೆಗಳು, ಆಹಾರದ ಪ್ಯಾಕೇಟ್ಗಳನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದಾನೆ. ಹಾಗೂ ಏರ್ ಏಷ್ಯಾದ ವಿರುದ್ಧ ಆನ್ಲೈನ್ ಮೂಲಕ ವಿದ್ಯಾರ್ಥಿ ದೂರು ದಾಖಲಿಸಿದ್ದಾನೆ.
ಬೆಳಗಾವಿ ನಿವಾಸಿ ಕಾರ್ತಿಕ್ ಸೂರಜ್ ಪಾಟೀಲ್ ತಮ್ಮೊಂದಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಸೂರಜ್ ಪಾಟೀಲ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಕೆಮಿಕಲ್ ಇಂಜಿನಿಯರಿಂಗ್ ಮುಗಿಸಿ ಮಲೇಷ್ಯಾದ ಪೆರಾಕ್ನಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಫೆಲೋಶಿಪ್ ಕಾರ್ಯಕ್ರಮ ಪಡೆದಿದ್ದಾರೆ. ಸದ್ಯ ಸೂರಜ್ ಪಾಟೀಲ್ ಬೆಂಗಳೂರಿನಿಂದ ಕೌಲಾಲಂಪುರಕ್ಕೆ ಏರ್ಏಷ್ಯಾ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದು, ಚೆಕ್-ಇನ್ಗಾಗಿ 20 ಕೆಜಿ ಲಗೇಜ್ ಅನ್ನು ಪ್ಯಾಕ್ ಮಾಡಿಕೊಂಡು ಮಾರ್ಚ್ 5ರ ಭಾನುವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.
ಏರ್ ಏಷ್ಯಾದ ಅಧಿಕೃತ ವೆಬ್ಸೈಟ್ನಲ್ಲಿ ಪ್ರತಿ ಪ್ರಯಾಣಿಕರಿಗೆ 15 ಕೆಜಿಯಷ್ಟು ಲಗೇಜನ್ನು ತೆಗೆದುಕೊಂಡು ಹೋಗಲು ಅವಕಾಶವಿದ್ದು ಹೆಚ್ಚಿನ ಪ್ರತಿ ಕೆಜಿಗೆ 500 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸುವಂತೆ ತಿಳಿಸಲಾಗಿದೆ. ಹೀಗಾಗಿ ನಾನು 5 ಕೆಜಿ ಹೆಚ್ಚುವರಿಯಾಗಿ ಲಗೇಜನ್ನು ಪ್ಯಾಕ್ ಮಾಡಿ 20 ಕೆಜಿ ಲಗೇಜ್ ತಂದಿದ್ದೆ. ಆದರೆ ನಾನು ನನ್ನ ಸೂಟ್ಕೇಸ್ ಅನ್ನು ಚೆಕ್ ಇನ್ ಮಾಡುವಾಗ, ನನಗೆ ಆಘಾತವಾಯಿತು. ಹೆಚ್ಚುವರಿ ಸಾಮಾನು ತೆಗೆದುಕೊಂಡು ಹೋಗಲು ನಾನು ಪ್ರತಿ ಕೆಜಿಗೆ 2,000 ರೂಪಾಯಿಗಳನ್ನು ಪಾವತಿಸಬೇಕು ಎಂದು ಬೆಂಗಳೂರು ವಿಮಾನ ನಿಲ್ದಾಣದ ಏರ್ಏಷ್ಯಾ ಕಾರ್ಯನಿರ್ವಾಹಕರೊಬ್ಬರು ತಿಳಿಸಿದರು.
ಪ್ರತಿ ಕೆಜಿ ಹೆಚ್ಚುವರಿ ಬ್ಯಾಗೇಜ್ಗೆ 500 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ನಿಮ್ಮ ಪೋರ್ಟಲ್ನಲ್ಲಿ ತಿಳಿಸಲಾಗಿದೆ ಎಂದು ನಾನು ಏರ್ಏಷ್ಯಾ ಗ್ರೌಂಡ್ ಸಿಬ್ಬಂದಿಗೆ ತೋರಿಸಿದೆ. ಆಗ ಅವರು ನೀವು ತಪ್ಪು ಸೈಟ್ಗೆ ಭೇಟಿ ನೀಡಿದ್ದೀರಿ. ಅಥವಾ ವಿವರಗಳನ್ನು ನವೀಕರಿಸಬೇಕಾಗಿದೆ ಎಂದರು. “ಮಲೇಷಿಯಾದಲ್ಲಿ ವಾಸಿಸುವ ಬೆಂಗಳೂರಿನ ನನ್ನ ಕಾಲೇಜು ಸ್ನೇಹಿತರಿಗಾಗಿ ನಾನು ಕೆಲವು ಬಟ್ಟೆಗಳನ್ನು ಮತ್ತು ಸಸ್ಯಾಹಾರಿ ಆಹಾರವನ್ನು ತೆಗೆದುಕೊಂಡು ಹೋಗುತ್ತಿದ್ದೆ. ಏಕೆಂದರೆ ನಾವು ವಿದೇಶದಲ್ಲಿರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ನಮಗೆ ಬಜೆಟ್ ಸಮಸ್ಯೆಯಾಗುತ್ತದೆ. ಹೆಚ್ಚುವರಿ ಸಾಮಾನುಗಳಿಗಾಗಿ 10,000 ರೂ.ಗಳನ್ನು ಪಾವತಿಸಲು ಒತ್ತಾಯಿಸಿದ್ದರಿಂದ ನಾನು ನನ್ನ ಲಗೇಜ್ ಅನ್ನು 20 ಕೆಜಿಯಿಂದ 15 ಕೆಜಿಗೆ ಇಳಿಸಿ ಬಟ್ಟೆ ಮತ್ತು ಆಹಾರವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಬಿಟ್ಟು ಬಂದೆ. ನಾನು ವಿದ್ಯಾರ್ಥಿ ಎಂಬ ಕನಿಕರವೂ ಇಲ್ಲದಂತೆ ವರ್ತಿಸಲಾಗಿದೆ” ಎಂದು ಪಾಟೀಲ್ ವಿಷಾದ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳದ್ದೇ ತಪ್ಪು -ಏರ್ ಏಷ್ಯಾ ಸ್ಪಷ್ಟನೆ
ಇನ್ನು ಘಟನೆ ಬಗ್ಗೆ ಏರ್ ಏಷ್ಯಾ ಸ್ಪಷ್ಟನೆ ನೀಡಿದೆ. ಪಾಟೀಲ್ ಅವರಂತೆ, ಏರ್ ಏಷ್ಯಾದ ಇತರ ಕೆಲವು ಪ್ರಯಾಣಿಕರು ಹೆಚ್ಚುವರಿ ಲಗೇಜ್ ಶುಲ್ಕದ ವಿಷಯದಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದಾರೆ ಎಂದು KIA ಮೂಲಗಳು ದೃಢಪಡಿಸಿವೆ ಏಕೆಂದರೆ ದರಗಳ ಬಗ್ಗೆ ಗೊಂದಲವಿದೆ. ವಿದ್ಯಾರ್ಥಿಗಳು airasia.co.in ಸೈಟ್ಗೆ ಭೇಟಿ ನೀಡಿದ್ದಾರೆ. ಇದು ದೇಶೀಯ ವಿಮಾನಗಳ ಪೋರ್ಟಲ್ ಆಗಿದೆ ಮತ್ತು ಇದರಲ್ಲಿ ಹೆಚ್ಚುವರಿ ಬ್ಯಾಗೇಜ್ ಶುಲ್ಕ ಕೆಜಿಗೆ 500 ರೂ ಇದೆ. ಅಂತರರಾಷ್ಟ್ರೀಯ ವಿಮಾನಯಾನ ಮಾಡುವ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಪೋರ್ಟಲ್ಗೆ ಭೇಟಿ ನೀಡಬೇಕು.
airasia.com ವೆಬ್ ಸೈಟ್ಗೆ ಭೇಟಿ ನೀಡಬೇಕಿತ್ತು. ಇದರಲ್ಲಿ ಹೆಚ್ಚುವರಿ ಲಗೇಜ್ ಶುಲ್ಕವನ್ನು ಪ್ರತಿ ಕಿಲೋಗೆ ರೂ 2,200 ಎಂದು ಸ್ಪಷ್ಟವಾಗಿ ನೀಡಲಾಗಿದೆ. ವಿಮಾನಯಾನ ಸಂಸ್ಥೆಯು ತಪ್ಪು ಮಾಡಿಲ್ಲ ಮತ್ತು ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ಸರಿಯಾಗಿ ತಮ್ಮ ಕಾರ್ಯನಿರ್ವಹಿಸಿದ್ದಾರೆ. ದೇಶೀಯ ವಿಮಾನ ಮತ್ತು ಅಂತರರಾಷ್ಟ್ರೀಯ ವಿಮಾನದ ಹೆಚ್ಚುವರಿ ಲಗೇಜ್ ಶುಲ್ಕ ಬೇರೆ ಬೇರೆ ಇದೆ. ಸರಿಯಾದ ವೆಬ್ಸೈಟ್ಗೆ ಭೇಟಿ ನೀಡಿ ಸರಿಯಾದ ಮಾಹಿತಿ ತಿಳಿಯಿರಿ ಎಂದು ಏರ್ ಏಷ್ಯಾ ಸ್ಪಷ್ಟನೆ ನೀಡಿದೆ.