ಬೆಳಗಾವಿ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಪಾರ ಪ್ರಮಾಣದ ಗೋವಾ ರಾಜ್ಯದ ಮದ್ಯವನ್ನು ಬೆಳಗಾವಿಯ ಅಬಕಾರಿ ಪೊಲೀಸರು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಗೋವಾದಿಂದ ಲಾರಿಯೊಂದರಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಮದ್ಯವನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಅಧೀಕ್ಷಕ ರವಿ ಮುರಗೋಡ್ ನೇತೃತ್ವದ ತಂಡ ಖಾನಾಪುರ ತಾಲೂಕಿನ ಕಣಕುಂಬಿ ಬಳಿಯ ಸುರಳಾ ಕ್ರಾಸ್ ಅಬಕಾರಿ ತನಿಖಾ ಠಾಣೆ ಬಳಿ ಗೋವಾದಿಂದ ಬರುತ್ತಿದ್ದ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಅಪಾರ ಪ್ರಮಾಣದ ಗೋವಾ ಮದ್ಯ ಪತ್ತೆಯಾಗಿದೆ.
ಲಾರಿಯಲ್ಲಿ ಅಕ್ರಮವಾಗಿ ಸುಮಾರು 1093.4 ಲೀಟರ್ ಗೋವಾ ಮದ್ಯವನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರದೀಪ್ ಕುಮಾರ್ ಮತ್ತು ರಾಮಚಂದರ್ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 27,52 ಲಕ್ಷ ಮೌಲ್ಯದ ಗೋವಾ ಮದ್ಯ ಹಾಗೂ ಮದ್ಯ ಸಾಗಾಟಕ್ಕೆ ಬಳಸಿದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಕಾರ್ಯಾಚರಣೆಯಲ್ಲಿ ಉಪ ಅಧೀಕ್ಷಕ ರವಿ ಮುರಗೋಡ, ನಿರೀಕ್ಷಕರುಗಳಾದ ಮಂಜುನಾಥ ಗಲಗಲಿ, ಬಾಳಗೌಡ ಪಾಟೀಲ್, ದುಂಡಪ್ಪ ಹಕ್ಕಿ ಮತ್ತು ಪೆದೆಗಳಾದ ಅರುಣಕುಮಾರ್ ಬಂಡಿಗಿ, ಮಂಜುನಾಥ ಮಾಸ್ತಮರ್ಡಿ, ಗುಂಡರಾವ್ ಪೂಜೇರಿ, ವಿಠ್ಠಲ್ ಕ್ವಾರಿ, ಮಹಾದೇವ ಕಟಗೆನ್ನವರ್, ಬಿ.ಎಸ್.ಆಟಿಗಲ್, ಸುನಿಲ್ ಪಾಟೀಲ್ ಚಾಲಕ ಸಯ್ಯದ್ ಜಲಾನಿ ಭಾಗವಹಿಸಿದ್ದರು.