ಬೆಳಗಾವಿ: ಮಹಾತ್ಮ ಗಾಂಧೀಜಿಯವರು ಇಡೀ ವಿಶ್ವಕ್ಕೆ ನೀಡಿದ ಸತ್ಯ ಮತ್ತು ಅಹಿಂಸಾ ಮಾರ್ಗವು ಸಾರ್ವಕಾಲಿಕ ಪ್ರಸ್ತುತವಾಗಿದೆ. ಈ ತತ್ವವನ್ನು ನಾವೆಲ್ಲರೂ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ಟಿಳಕವಾಡಿಯ ವೀರಸೌಧದಲ್ಲಿ ಇಂದು ಆಯೋಜಿಸಲಾಗಿದ್ದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ಅಹಿಂಸಾ ಹೋರಾಟಕ್ಕೆ ಸ್ಫೂರ್ತಿಯಾಗಿದ್ದ ಮಹಾತ್ಮಾ ಗಾಂಧೀಜಿಯವರ ವ್ಯಕ್ತಿತ್ವವನ್ನು ಸ್ಮರಿಸಿದ ಜಿಲ್ಲಾಧಿಕಾರಿಗಳು, ಸಮಪಾಲು, ಸಮಬಾಳು ಎಂಬುದು ನಮ್ಮ ದೇಶದ ಸಂವಿಧಾನದ ಆಶಯವಾಗಿದ್ದು, ಆ ಪ್ರಕಾರವೇ ದೇಶ ನಡೆಯುತ್ತಿದೆ ಎಂದರು. ಕೊರೊನಾ ಹಿನ್ನೆಲೆಯಲ್ಲಿ ಗಾಂಧೀಜಿ ಜಯಂತಿ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ಕಂಡ ಸ್ವಚ್ಚ ಭಾರತ ಹಾಗೂ ಆರೋಗ್ಯ ಭಾರತದ ಕನಸು ಸಾಕಾರಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದರು. ಭಾರತದ ಪ್ರಧಾನಮಂತ್ರಿಗಳಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರು ಅತ್ಯಂತ ಸರಳಜೀವಿಯಾಗಿದ್ದರು. ಅವರು ರೈಲ್ವೆ ಸಚಿವರಾಗಿದ್ದಾಗ ರೈಲು ದುರಂತವೊಂದು ನಡೆದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಮೂಲಕ ಮಾದರಿಯಾಗಿದ್ದರು ಎಂದು ಜಿಲ್ಲಾಧಿಕಾರಿ ಹೇಳಿದರು. ಭಾರತವು ತಟಸ್ಥ ನೀತಿಯನ್ನು ಅನುಸರಿಸುವ ಮೂಲಕ ಇಡೀ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
ಅದೇ ರೀತಿ ಉಪವಾಸ ಸತ್ಯಾಗ್ರಹ, ಅಹಿಂಸಾ ಹೋರಾಟ ಗಾಂಧೀಜಿ ಯವರ ತತ್ವಗಳು ಇಂದು ಇಡೀ ಜಗತ್ತಿಗೆ ಮಾದರಿಯಾಗಿವೆ ಎಂದರು. ಸಂಗೀತ ಶಿಕ್ಷಕರಾದ ವಿನಾಯಕ ಮೋರೆ ಹಾಗೂ ಸಂಗಡಿಗರು ಗಾಂಧೀ ಪ್ರಿಯ ಭಜನೆಗಳನ್ನು ಪ್ರಸ್ತುತಪಡಿಸಿದರು. ಸುಶ್ರಾವ್ಯವಾಗಿ ಪ್ರಸ್ತುತಪಡಿಸಲಾದ ವೈಷ್ಣವ ಜನತೋಃ, ರಘುಪತಿ ರಾಜಾರಾಮ… ಮತ್ತಿತರ ಭಜನೆಗಳಿಗೆ ಎಲ್ಲರೂ ತಲೆದೂಗಿದರು. ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್.ಕೆ.ಎಚ್. ಸ್ವಾಗತಿಸಿದರು. ಸರ್ವಮಂಗಳಾ ಅರಳಿಮಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್. ಅವರನ್ನು ಸಂಘದ ಅಧ್ಯಕ್ಷರಾದ ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ ಸನ್ಮಾನಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಪಾಲಿಕೆಯ ಅಭಿಯಂತರರಾದ ಲಕ್ಷ್ಮೀ ನಿಪ್ಪಾಣಿಕರ, ರಾಜೇಂದ್ರ ಕಲಘಟಗಿ, ಅರುಣ ಚಿಬತೆ, ಆಚಾರ್ಯ ಸುರೇಂದ್ರ ದೇಸಾಯಿ, ಶಿವಾಜಿರಾವ್ ಕದಂ, ಮಾರುತರಾವ್ ಲೋಹಾರ್, ವಿಜಯರಾವ್ ಶಿಂಗತೆ, ಡಾ.ಸವಿತಾ ಗುರವ, ನಮೃತಾ ಕುಲಕರ್ಣಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.