ಬೆಳಗಾವಿ: ರಾಜ್ಯಾದ್ಯಂತ ಸದ್ದು ಮಾಡಿದ್ದ ಬೆಳಗಾವಿ- ಪೀರನವಾಡಿಯ ಶೂರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಇಂದು ಮಧ್ಯರಾತ್ರಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೀರನವಾಡಿ ಗ್ರಾಮದಲ್ಲಿ ಈ ಹಿಂದೆ ಗುರುತಿಸಿದ್ದ ಸ್ಥಳದಲ್ಲೇ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಕ್ರಾಂತಿಯ ಕಹಳೆ ಊದಿದ್ದಾರೆ.
ಹಲವಾರು ವರ್ಷಗಳಿಂದ ಪೀರನವಾಡಿ ಗ್ರಾಮದ ಮುಖ್ಯ ಸರ್ಕಲ್ ನಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಹೋರಾಟ ಮಾಡುತ್ತ ಬಂದಿದ್ದ ರಾಯಣ್ಣನ ಪರಮ ಭಕ್ತರಿಗೆ ಇದು ಜಯದ ಕ್ಷಣವಾಗಿದೆ. ಇಂದು ಕರವೇ ಕಾರ್ಯಕರ್ತರು ಮೂರ್ತಿ ಪ್ರತಿಷ್ಠಾಪನೆ ಮಾಡಿ, ರಾಯಣ್ಣನ ಮೂರ್ತಿಗೆ ದೊಡ್ಡ ಹೂಮಾಲೆ ಹಾಕಿ, ಕ್ರಾಂತಿವೀರ, ಶೂರ, ಧೀರ ಸಂಗೊಳ್ಳಿ ರಾಯಣ್ಣನ ಪರ ಘೋಷಣೆಗಳನ್ನು ಕೂಗುವ ಮೂಲಕ ರಾತ್ರಿ ವಿಜಯೋತ್ಸವ ಆಚರಿಸಿದ್ದಾರೆ. ನಿನ್ನೆ ಗುರುವಾರ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ದೊಡ್ಡ ಹೋರಾಟವೇ ನಡೆದಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಇದೇ ತಿಂಗಳ 29 ರಂದು ಅಂತಿಮ ನಿರ್ಧಾರ ಕೈಗೊಳ್ಳುವ ಭರವಸೆ ನಿಡಿದ್ದರು. ಆದರೆ ಮಧ್ಯರಾತ್ರಿ, ರಾಯಣ್ಣನ ಸೇನಾನಿಗಳು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಗೋರಿಲ್ಲಾ ಯುದ್ಧದ ಮಾದರಿಯಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ವಿವಾದವನ್ನು ಅಂತ್ಯಗೊಳಿಸಿದ್ದಾರೆ. ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ವಿಷಯ ಪೋಲೀಸರಿಗೆ ಗೊತ್ತಾಗುತ್ತಿದ್ದಂತೆಯೇ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.