ವಿಜಯಪುರ: ಗುಮ್ಮಟನಗರಿ ವಿಜಯಪುರ ಜಿಲ್ಲೆಯಾದ್ಯಂತ ಮತ್ತೆ ವರುಣ ಅಬ್ಬರಿಸುತ್ತಿದ್ದಾನೆ. ಜಿಲ್ಲೆಯಲ್ಲಿ ಮೊನ್ನೆ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು, ವಿಜಯಪುರ ನಗರದಲ್ಲೇ ನಿನ್ನೆ ಒಂದೇ ದಿನ 53.4 ಮಿ.ಮಿ. ಮಳೆಯಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಮಳೆಯಲ್ಲಿಯೇ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಜೋರಾಗಿದೆ. ಜಿಲ್ಲೆಯಾದ್ಯಂತ ಎರಡೇ ದಿನದಲ್ಲಿ ಒಟ್ಟು 30.58 ಮಿಲಿ ಮೀಟರ್ ಮಳೆಯಾಗಿದೆ. ತಾಳಿಕೋಟೆ ತಾಲೂಕಿನಲ್ಲಿ ಅತಿ ಹೆಚ್ಚು 56.85 ಮಿ.ಮೀಟರ್ ಮಳೆಯಾಗಿದೆ. ಚಡಚಣ ತಾಲೂಕಿನಲ್ಲಿ ಅತಿ ಕಡಿಮೆ 12.0 ಮಿ.ಮೀಟರ್ ಮಳೆಯಾಗಿದೆ.
ಮಳೆಯಿಂದಾಗಿ ಹಲವು ಕಡೆ ಜಾನುವಾರುಗಳು ಸಾವನಪ್ಪಿದ್ದು, 10 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಸಿಂದಗಿ ತಾಲೂಕಿನ ಕುಳೆಕುಮಟಗಿ ಗ್ರಾಮದಲ್ಲಿ ಗಂಗಾಧರ ಎಂಬುವರಿಗೆ ಸೇರಿದ ಎತ್ತು ಕೊಟ್ಟೆಗೆಯಲ್ಲಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದೆ. ತಾಳಿಕೋಟೆ ತಾಲೂಕಿನ ಡೋಣಿ ನದಿಯ ಸೇತುವೆ ಮುಳಗಡೆಯಾಗಿದೆ. ಮುದ್ದೇಬಿಹಾಳದಲ್ಲಿ ಹಲವು ಮನೆಗಳು ಕುಸಿತಗೊಂಡಿವೆ. ಮಳೆ ನೀರಿನಿಂದ ಬೆಳೆ ಸಹ ಜಲಾವೃತವಾಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಬಸವನಬಾಗೇವಾಡಿ, ಸಿಂದಗಿ, ಇಂಡಿ, ಆಲಮೇಲ ಭಾಗದಲ್ಲಿ ಮಳೆಯಿಂದ ಜನ ಸಂಚಾರ ವಿರಳವಾಗಿದೆ. ದೇವರ ಹಿಪ್ಪರಗಿ ಪಟ್ಟಣ ಸೇರಿದಂತೆ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಪಟ್ಟಣದಿಂದ ಮುಳಸಾವಳಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಡ್ಡರಸ್ತೆ ಜಲಾವೃತವಾಗಿದೆ.
ಇಂಡಿ ತಾಲೂಕು ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ಸೇತುವೆಗಳು ಜಲಾವೃತವಾಗಿವೆ. ಮಹಾರಾಷ್ಟ್ರದಿಂದ ಮತ್ತೆ ಹೆಚ್ಚುವರಿ ನೀರು ಹರಿದು ಬಂದರೆ ಭೀಮಾ ನದಿಗೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ವಿಜಯಪುರ ನಗರ 53.4, ಭೂತನಾಳ 28.8, ನಾಗಠಾಣ 6.3, ಹಿಟ್ನಳ್ಳಿ 60.6 ಸೇರಿ 37.27 ಮಿ.ಮೀಟರ್, ಬಬಲೇಶ್ವರ 27.8, ತಿಕೋಟಾ 16.75, ಬಾಗೇವಾಡಿ 54.66, ನಿಡಗುಂದಿ 31.6, ಕೊಲ್ಹಾರ 13.1, ಮುದ್ದೇಬಿಹಾಳ 50.7, ತಾಳಿಕೋಟೆ 50.85, ಇಂಡಿ 19.26, ಚಡಚಣ 12.0, ಸಿಂದಗಿ 41.62 ಹಾಗೂ ದೇವರಹಿಪ್ಪರಗಿ ತಾಲೂಕಿನಲ್ಲಿ 53.4 ಮಿಲಿ ಮೀಟರ್ ಮಳೆಯಾಗಿದೆ.