ಬಳ್ಳಾರಿ: ವೈದ್ಯರಿಗೆ ಸುರಕ್ಷತಾ ಪರಿಕರಗಳ ಕೊರತೆ ಇರುವುದು ಗಮನದಲ್ಲಿದ್ದು, ಶೀಘ್ರದಲ್ಲಿ ಅವುಗಳನ್ನು ವೈದ್ಯರಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದ್ದಾರೆ. ಇಡೀ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿ ವ್ಯವಸ್ಥೆ ಮಾಡಲಾಗಿದ್ದು, ಏಳರಿಂದ ಎಂಟು ಸಾವಿರ ಬೆಡ್ ವ್ಯವಸ್ಥೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಸುರಕ್ಷತಾ ಪರಿಕರಗಳ ಕಿಟ್(ಪಿಪಿಇ)ಗಳ ಕೊರತೆಯಾಗುವುದು ಸಹಜ. ಇದು ನಮ್ಮ ಗಮನದಲ್ಲಿದ್ದು ಆದಷ್ಟು ಬೇಗ ವೈದ್ಯರಿಗೆ ಈ ಸುರಕ್ಷತಾ ಪರಿಕರ ಕಿಟ್ ಒದಗಿಸಿಕೊಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ 700 ವೆಂಟಿಲೆಟರ್ ವ್ಯವಸ್ಥೆ : 350 ಆರ್ಡರ್
ಇನ್ನು ರಾಜ್ಯದಲ್ಲಿ ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ 700 ವೆಂಟಿಲೇಟರ್‍ಗಳು ನಮ್ಮಲ್ಲಿವೆ. ಹೆಚ್ಚುವರಿಯಾಗಿ 350 ವೆಂಟಿಲೆಟರ್‍ಗಳ ಖರೀದಿಗೆ ಆರ್ಡ್‍ರ್ ನೀಡಲಾಗಿದ್ದು, ಅವುಗಳು ಬಂದಿರಬಹದು. ಪರಿಶೀಲಿಸಲಾಗುವುದು ಎಂದು ಹೇಳಿದ ಸಚಿವ ಶ್ರೀರಾಮುಲು, ಇದುವರೆಗೆ ವೆಂಟಿಲೆಟರ್ ಮೂಲಕ ಕೊರೊನಾ ಸೊಂಕಿತರಿಗೆ ಚಿಕಿತ್ಸೆ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಸಮರ್ಪಕವಾಗಿ ಥರ್ಮಲ್ ಸ್ಕ್ಯಾನರ್‍ಗಳನ್ನು ಇಡೀ ರಾಜ್ಯದ ಎಲ್ಲೆಡೆ ಒದಗಿಸುವುದಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು. ಕಳಪೆ ಮಾಸ್ಕ್ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವುದು ಸೇರಿದಂತೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಜನರು ಯಾವುದೇ ಕಾರಣಕ್ಕೂ ಕಳಪೆ ಮಾಸ್ಕ್ ಖರೀದಿಸಬಾರದು ಎಂದು ಅವರು ಮನವಿ ಮಾಡಿದರು. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರೊಂದಿಗೆ ನಿನ್ನೆ ಚರ್ಚಿಸಲಾಗಿದ್ದು, ಅವರು ಇನ್ನೂ ಎರಡು ವಾರಗಳ ಕಾಲ ಹೋಮ್‍ಕ್ವಾರಂಟೈನ್ ಸಮರ್ಪಕವಾಗಿ ಮಾಡುವಂತೆ ತಿಳಿಸಿದ್ದಾರೆ. ಅವರೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಎನ್-95 ಮಾಸ್ಕ್, ತ್ರೀಬಲ್ ಲೇಯರ್ ಮಾಸ್ಕ್, ಸುರಕ್ಷತಾ ಪರಿಕರಗಳ ಕಿಟ್, ವೆಂಟಿಲೇಟರ್, ಸ್ಯಾನಿಟೈಸರ್ ಅಗತ್ಯತೆ ಕುರಿತು ಅವರಿಗೆ ತಿಳಿಸಲಾಗಿತ್ತು. ಅವರು ವಿಶೇಷ ವಿಮಾನದ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟಿದ್ದು, ಅವುಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ 91 ಜನರಿಗೆ ಪಾಸಿಟಿವ್
ರಾಜ್ಯದಲ್ಲಿ ಇದುವರೆಗೆ 91 ಜನರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅದರಲ್ಲಿ 6 ಜನರು ಗುಣಮುಖರಾಗಿದ್ದು, ಮೂರು ಜನರು ಮೃತಪಟ್ಟಿದ್ದಾರೆ ಎಂದು ಸಚಿವ ಶ್ರೀರಾಮುಲು ವಿವರಿಸಿದರು. 26 ಸಾವಿರ ಜನರನ್ನು ಗುರುತಿಸಿ ಅದರಲ್ಲಿ 3243 ಜನರ ಸ್ಯಾಂಪಲ್ ಲ್ಯಾಬ್‍ನಲ್ಲಿ ಪರೀಕ್ಷಿಸಲಾಗಿ ಅದರಲ್ಲಿ 91 ಜನರಿಗೆ ಸೊಂಕು ಇರುವುದು ದೃಢಪಟ್ಟಿದೆ. 226 ಜನರು ಐಸೋಲೇಶಷನ್ ವಾರ್ಡ್‍ನಲ್ಲಿದ್ದಾರೆ ಎಂದು ಅವರು ವಿವರಿಸಿದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳು, ಟಾಸ್ಕ್ ಫೋರ್ಸ್, ಮುಖ್ಯಮಂತ್ರಿಗಳು ಹಾಗೂ ನಾನೂ ಸಭೆ ನಡೆಸಿ ಸೊಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಈ ಕೆಲಸದಲ್ಲಿ ನಿರತರಾಗಿರುವವರಲ್ಲಿ ಆತ್ಮಸ್ಥೈರ್ಯ, ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಹೊಸಪೇಟೆಯಲ್ಲಿ 3 ಪಾಸಿಟಿವ್
ಹೊಸಪೇಟೆಯಲ್ಲಿಯೂ ಮೂರು ಜನರಿಗೆ ಕೊರೊನಾ ಸೊಂಕು ಪಾಸಿಟಿವ್ ಇರುವುದು ನಿನ್ನೆ ಸಂಜೆ ದೃಢಪಟ್ಟಿದೆ. ಇಡೀ ನಗರವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ. ಸೊಂಕಿತರ ಮನೆಯ 5 ಕಿ.ಮೀ ಸುತ್ತ ಬಫರ್‍ಝೋನ್ ಆಗಿ ಮಾಡಲಾಗಿದೆ. ಅಲ್ಲಿ ಸೊಂಕು ವ್ಯಾಪಿಸದಂತೆ ಎಲ್ಲ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ ಎಂದು ಅವರು ವಿವರಿಸಿದರು. ಅವರ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.