ಧಾರವಾಡ: ‘ಆ್ಯನ್ ಅಂಥ್ರೊಪಾಲಜಿಕಲ್ ಸ್ಟಡಿ ಆಫ್ ಫಿಮೇಲ್ ಅಫೆಂಡರ್ಸ್ ಇನ್ ಕರ್ನಾಟಕ’ ಹೆಸರಿನ ಶೀರ್ಷಿಕೆ ಅಡಿ ಮಾನವಶಾಸ್ತ್ರ ಅಧ್ಯಯನದ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಸಂಶೋಧನಾರ್ಥಿ, ದಕ್ಷ ಪೊಲೀಸ್ ಅಧಿಕಾರಿ ಶ್ರೀಮೋತಿಲಾ ರಾಮಸ್ವಾಮಿ ಪವಾರ್ ಅವರಿಗೆ “ಡಾಕ್ಟರ್ ಆಫ್ ಫಿಲಾಸಫಿ” ಪದವಿ ಪ್ರಧಾನ ಮಾಡಲು ಸಿಂಡಿಕೇಟ್ ಸಭೆಯ ಪರವಾಗಿ ಕವಿವಿಯ ಮಾನ್ಯ ಕುಲಪತಿಗಳು ಒಪ್ಪಿಗೆ ನೀಡಿದ್ದಾರೆ.ಶ್ರೀಮೋತಿಲಾ ಪವಾರ್ ಅವರು ಕರ್ನಾಟಕ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವ್ಹಿ.ಜಗದೀಶ್ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಶ್ರೀಯುತರು ಕರ್ನಾಟಕ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಅಗ್ರಿ) ಸೀಡ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಪದವಿ ಪಡೆದಿದ್ದಾರೆ. ದಕ್ಷತೆಗೆ ಹೆಸರಾದ ಪೊಲೀಸ್ ಅಧಿಕಾರಿ ಶ್ರೀಮೋತಿಲಾ ಪವಾರ್, ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಧ್ಯ ಸಿಪಿಐ ಹುದ್ದೆಯಲ್ಲಿರುವ ಶ್ರೀಯುತರಿಗೆ ಸಂದ ಈ ಗೌರವಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಕುಟುಂಬಸ್ಥರು, ಸ್ನೇಹಿತರು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದು, ಶ್ರೀಯುತರು ಇನ್ಮುಂದೆ ಡಾ.ಮೋತಿಲಾ ಪವಾರ್ ಆಗಲಿದ್ದಾರೆ.