ಕೂಗು ನಿಮ್ಮದು ಧ್ವನಿ ನಮ್ಮದು

ಭೀಮೆಯ ಅಬ್ಬರಕ್ಕೆ ನರಕ ಸದೃಶ್ಯವಾದ ಬದುಕು: ಪ್ರವಾಹಕ್ಕೆ ಅಕ್ಷರಶಃ ತತ್ತರಿಸಿದ ವಿಜಯಪುರ

ವಿಜಯಪುರ: ಭೀಮಾನದಿ ಪ್ರವಾಹ ಅಕ್ಷರಶಃ ನದಿ ಪಾತ್ರದ ಜನತೆಯ ಬದುಕನ್ನು ನರಕ ಮಾಡಿದೆ. ಕ್ಷಣ ಕ್ಷಣಕ್ಕೂ ಏರುತ್ತಿರುವ ಪ್ರವಾಹ ಮತ್ತಷ್ಟು ಆತಂಕಕ್ಕೀಡು ಮಾಡುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ನರಕ ಸದೃಶ್ಯವನ್ನೆ ಸೃಷ್ಟಿ ಮಾಡಿದೆ. ಭೀಮೆಯ ಪ್ರವಾಹದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿ ಭೀಮೆ ಉಕ್ಕಿ ಹರಿಯುತ್ತಿದ್ದಾಳೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ ನಾಲ್ಕು ದಿನಗಳ ಹಿಂದೆ ಸುರಿದ ಮಳೆ ಈ ಭಾಗದ ಜನರನ್ನು ಹೈರಾಣು ಮಾಡಿದೆ. ಸದ್ಯ ಭೀಮೆಯಲ್ಲಿ 8 ಲಕ್ಷ 10 ಸಾವಿರ ಕ್ಯೂಸೆಕ್ಸ್ ನೀರಿನ ಒಳ ಹರಿವು ಇದ್ದು, ಜಿಲ್ಲೆಯ ಆಲಮೇಲ ತಾಲ್ಲೂಕಿನ ರತ್ನಾಪುರ ಗ್ರಾಮ ಅಕ್ಷರಶಃ ನಡುಗಡ್ಡೆಯಾಗಿ ಹೋಗಿದೆ.

ಸದ್ಯ ಗ್ರಾಮಕ್ಕೆ NDRF ತಂಡ ಜಿಲ್ಲಾಡಳಿತದ ಕೋರಿಕೆ ಮೇರೆಗೆ ಆಗಮಿಸಿದ್ದು ತಂಡದಲ್ಲಿ 18 ಜನ ನುರಿತ ರಕ್ಷಣಾ ತಜ್ಞರು, ಎರಡು ಯಾಂತ್ರಿಕೃತ ದೋಣಿಗಳೊಂದಿಗೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ‌‌‌. ಮುನ್ನೆಚ್ಚರಿಕಾ ಕ್ರಮವಾಗಿ ಸೊನ್ನ ಬ್ಯಾರೇಜ್‌ಗೆ ಜಿಲ್ಲಾಧಿಕಾರಿ ಸುನೀಲ್‌ ಕುಮಾರ್ ಭೇಟಿ ನೀಡಿ ಬ್ಯಾರೇಜ್ ಬಳಿ ನೀರಿನ ಹರಿವು ಪರಿಶೀಲಿಸಿದ್ದಾರೆ‌. 8.10 ಲಕ್ಷ ಕ್ಯುಸೆಕ್ ನೀರು ಹರಿವಿನಿಂದ ಭೀಮಾತೀರದಲ್ಲಿ ಆತಂಕ ಎದುರಾಗಿದೆ. ಇನ್ನೂ ತುಂಬಿ ಹರಿಯುತ್ತಿರುವ ನದಿಯಲ್ಲೇ ಇಬ್ಬರು ಈಜಿ ಜೀವ ಉಳಿಸಿಕೊಂಡಿರುವ ಘಟನೆಯೂ ಜರುಗಿದೆ. ಜಿಲ್ಲೆಯ ದೂಳಖೇಡ ಗ್ರಾಮದಲ್ಲಿನ ರೇವಣಸಿದ್ದ ಹಾಗೂ ಮಹಾದೇವಪ್ಪ ಎಂಬ ಸಹೋದರರು ಮನೆಯಲ್ಲೇ ಉಳಿದಿದ್ದರು. ಪ್ರವಾಹದ ನೀರು ಅಧಿಕವಾದ ಕಾರಣ ಹರಿಯುತ್ತಿರುವ ನೀರಿನಲ್ಲೇ ಈಜಿ ದಡ ಸೇರಿದ್ದಾರೆ. ಅಲ್ಲದೇ ತಾವರಖೇಡ್ ಗ್ರಾಮವು ಮುಳುಗಡೆಯಾಗಿದ್ದು, ಗ್ರಾಮಸ್ಥರ ಗೋಳು‌ ಕೇಳೋರಿಲ್ಲ.‌

ಪ್ರವಾಹದ ನಡುವೆಯೆ ಟ್ರ್ಯಾಕ್ಟರ್ ಮೂಲಕ ಜನ, ಸಾಮಾನುಗಳ ಸಾಗಾಟ ನಡೆಸಿದ್ದಾರೆ‌. ಹಾಗೂ ಗ್ರಾಮಸ್ಥರು ವೃದ್ಧನನ್ಮು ನೀರಿನಿಂದ ರಕ್ಷಿಸಿ ಹೊರಗೆ ತಂದಿದ್ದಾರೆ. ಈವರೆಗೂ ಯಾವ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿಲ್ಲ, ಸಹಾಯ ಹಸ್ತ ಚಾಚಿಲ್ಲ ಎಂದು ಗ್ರಾಮಸ್ಥರು ಅಳಲು‌ ತೋಡಿಕೊಂಡಿದ್ದಾರೆ. ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದಲ್ಲಿನ 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಕೆಲ ತೋಟದ ಮನೆಗಳು ಸಂಪೂರ್ಣ ಮುಳುಗಡೆ ಯಾಗಿದ್ದು ಮನೆ ಎಲ್ಲಿದೆ ಎಂಬುದೇ ಗೋಚರಿಸದಂತಹ ಸ್ಥಿತಿಗೆ ತಲುಪಿದೆ. ಇನ್ನು ಜನ್ರು ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ‌. ಕೆಲ ಕುಟುಂಬಗಳು ಮನೆಯ ಮೇಲೇರಿ ಕುಳಿತಿವೆ. ದೇವಸ್ಥಾನಗಳೂ ಸಹ ಮುಳುಗಡೆಯಾಗಿವೆ. ಒಟ್ನಲ್ಲಿ ಭೀಮಾತೀರದ ಪ್ರವಾಹದಿಂದ ಹಲವರ ಕನಸುಗಳು ನುಚ್ಚು ನೂರಾಗಿ.. ಪ್ರಾಣ ಉಳಿದರೆ ಸಾಕು ಅನ್ನೊ ಪರಿಸ್ಥಿತಿಯನ್ನು ಭೀಮೆ ತಂದಿಟ್ಟಿದ್ದಾಳೆ.‌

error: Content is protected !!