ಬೆಳಗಾವಿ: ರಾಜ್ಯ ಸರ್ಕಾರ ಶಾಲಾ ಮಕ್ಕಳಿಗಾಗಿ ಜಾರಿಗೆ ತಂದ ಕ್ಷೀರ ಭಾಗ್ಯ ಯೋಜನೆ ಭ್ರಷ್ಟ ಅಧಿಕಾರಿಗಳ ಕಪಿಮುಷ್ಟಿಯಲ್ಲಿ ಸಿಕ್ಕು ದಂಧೆಗೆ ಬಳಕೆಯಾಗುತ್ತಿದೆ. ಹೀಗೆ ಮಕ್ಕಳಿಗಾಗಿಯೇ ಸಿದ್ದಪಡಿಸಿದ ಕ್ಷೀರ ಭಾಗ್ಯ ಯೋಜನೆಯ ನಂದಿನಿ ಹಾಲಿನ ಪೌಡರ್ ನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ತೆರಳುತ್ತಿದ್ದ ಖದಿಮರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೈಲಹೊಂಗಲ ಸಿಪಿಐ ಯು.ಎಚ್.ಸಾತೇನಹಳ್ಳಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಹಿರಿಯ ಆರೋಗ್ಯ ಸಹಾಯಕರು ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 15 ಲಕ್ಷ ಮೌಲ್ಯದ 6 ಟನ್ ನಷ್ಟು ಭಾರಿ ಪ್ರಮಾಣದ ನಂದಿನಿ ಹಾಲಿನ ಪೌಡರನ್ನು ವಶಪಡಿಸಿಕೊಂಡಿದ್ದಾರೆ. ಧಾರವಾಡದ ಬೆಲೂರು ಇಂಡಸ್ಟ್ರಿಯಲ್ ಏರಿಯಾದಿಂದ ಕ್ಯಾಂಟರ್ ಗೂಡ್ಸ್ ವಾಹನದಲ್ಲಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ.
ದಾಳಿ ವೇಳೆ ನಂದಿನಿ ಹಾಲಿನ ಪೌಡರ್ ನ 25 ಕೆಜಿ ತೂಕದ 240 ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ ಗೂಡ್ಸ್ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದು, ವಾಹನ ಚಾಲಕ ಆರೋಪಿ ಪುಂಡಲೀಕ ಯಕ್ಕುಂಡಿ ಯನ್ನು ಬಂಧಿಸಿದ್ದಾರೆ. ಇನ್ನು ದಾಳಿಗೆ ಸಂಬಂಧಿಸಿದಂತೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಕಲಂ 3 ಸಹ ಕಲಂ 7 ಅಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ಅಮರನಾಥ್ ರೆಡ್ಡಿ ಹಾಗೂ ಬೈಲಹೊಂಗಲ ಡಿಎಸ್ಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ನಡೆದ ದಾಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.