ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಕನಸು ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತವರು ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ್ದಾರೆ. ಅಂದಾಜು 1 ಸಾವಿರ ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು ಕೇಂದ್ರ ಸರ್ಕಾರ ಶೇ 50 ರಷ್ಟು ಹಾಗೂ ಶೇ 50 ರಷ್ಟು ಹಣವನ್ನ ರಾಜ್ಯ ಸರ್ಕಾರ ಭರಿಸಲಿದೆ.
ಬೆಳಗಾವಿ-ಧಾರವಾಡ ನೂತನ ರೈಲು ಮಾರ್ಗದಲ್ಲಿ ಒಟ್ಟು 9 ನಿಲ್ದಾಣಗಳು ಬರಲಿದ್ದು, ಬೆಳಗಾವಿ- ದೇಸೂರ- ಕರವಿನಕೊಪ್ಪ- ಹಿರೇಬಾಗೇವಾಡಿ – ಎಂ.ಕೆ.ಹುಬ್ಬಳ್ಳಿ- ಹೂಲಿಕಟ್ಟಿ- ಕಿತ್ತೂರ-ತೇಗೂರ- ಮಮ್ಮಿಗಟ್ಟಿ- ಕ್ಯಾರಕೊಪ್ಪ ನಿಲ್ದಾಣಗಳ ಮೂಲಕ ಧಾರವಾಡ ತಲುಪಲಿದೆ. ಬೆಳಗಾವಿ-ಧಾರವಾಡ ಮಧ್ಯೆ ಕೇವಲ 1 ಗಂಟೆ ಅವಧಿಯ ಪ್ರಯಾಣ ಮಾರ್ಗ ಇದಾಗಲಿದೆ.
ಸೋಮವಾರ ಬೆಳಗಾವಿಯ ಕಾಡಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸುರೇಶ್ ಅಂಗಡಿ, ಬೆಳಗಾವಿ- ಹುಬ್ಬಳ್ಳಿ- ಧಾರವಾಡ ಜನರ ಬಹು ವರ್ಷಗಳ ಬೇಡಿಕೆ ಇದಾಗಿತ್ತು. 2019 ರಲ್ಲಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಈಗ ಅನುಮೋದನೆ ಸಿಕ್ಕಿದ್ದು ಸಂತಸ ತಂದಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬೆಳಗಾವಿ- ಧಾರವಾಡಕ್ಕೆ ತಲುಪುವ ವ್ಯವಸ್ಥೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಬೆಳಗಾವಿ, ಧಾರವಾಡದ ಜನತೆಯ ಪರವಾಗಿ ವಿಶೇಷವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.