ಗದಗ: ಪಬ್ಜಿ ಗೇಮ್ ಅಂದ್ರೆ ಸಾಕು ನಮ್ಮ ಯುವಪಿಳಿಗೆ ಹಗಲು, ರಾತ್ರಿ ಎನ್ನದೆ ಅದಕ್ಕೆ ಮಾರು ಹೋದ ಉದಾಹರಣೆಗಳು ಸಾಕಷ್ಟಿದೆ. ಅದರಲ್ಲೂ ಪಬ್ಜಿ ಗೇಮ್ ಗೀಳಿಗೆ ಅಂಟಿಕೊಂಡ ಅದೆಷ್ಟೋ ಯುವಕರು ಸಾವಿನ ಕದ ತಟ್ಟಿದನ್ನು ನಾವು-ನೀವೆಲ್ಲಾ ನೋಡಿದಿವಿ. ಅಂದಹಾಗೆ ಪಬ್ಜಿ ಗೇಮ್ ಗೆ ಮಾರುಹೋದ ಯುವಕನೋರ್ವ ನೇಣಿಗೆ ಶರಣಾಗಿದ್ದಾನೆ.
ಇನ್ನು ಇತ್ತಿಚೆಗೆ ಮಹಾಮಾರಿ ಕೊರೊನಾ ಇಡೀ ದೇಶದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಆನ್ ಲೈನ್ ಕ್ಲಾಸ್ ಮೂಲಕ ವಿದ್ಯಾರ್ಥಿಗಳು ಮನೆಯಿಂದಲೇ ಪಾಠ ಕೇಳುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಆನ್ಲೈನ್ ಕ್ಲಾಸ್ ಗಳಿಗೆ ಅನುಕೂಲ ಆಗಲೆಂದು ಮೊಬೈಲ್ ಫೋನ್ ಕೊಡಿಸಿದ್ದಾರೆ. ಆದರೆ ಆ ಮೊಬೈಲ್ ನಲ್ಲಿ ಮಕ್ಕಳು ಆನ್ಲೈನ್ ಕ್ಲಾಸ್ ಗೆ ಅಟೆಂಡ್ ಆಗುತ್ತಿದ್ದಾರಾ ಅಥವಾ ಮತ್ತೆನಾದ್ರು ಬೇರೆ ಮಾಡ್ತಿದಾರಾ ಅಂತ ನೋಡುವ ಗೋಜಿಗೆ ಹೋಗುತ್ತಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡ ವಿದ್ಯಾರ್ಥಿಗಳು ಮೊಬೈಲ್ ಹಿಡಿದುಕೊಂಡು ಪಬ್ಜಿಯಂತಹ ಆನ್ಲೈನ್ ಗೇಮ್ ಗೀಳಿಗೆ ಅಂಟಿಕೊಂಡಿದ್ದಾರೆ.
ಅಂದಹಾಗೆ ಆನ್ಲೈನ್ ಕ್ಲಾಸ್ ನೆಪದಲ್ಲಿ ಪಬ್ಜಿ ಆಡುತ್ತಿದ್ದ ಯುವಕನ ಕೈಯಿಂದ ಮೊಬೈಲ್ ಕಸಿದುಕೊಂಡು ಗೇಮ್ ಆಡಬೇಡ ಎಂದು ಬುದ್ದಿ ಹೇಳಿದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾರ್ತಿಕ್ ಬಬಲಿ (17) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಹಿರೆಪೇಟೆ ಮನೆಯಲ್ಲಿ ಈ ಘಟನೆ ನಡೆದಿದೆ. ಬರೀ ಗೇಮ್ ಆಡ್ತಿಯಾ, ಓದು ಅಂತ ಬೈದು ಕುಟುಂಬಸ್ಥರು ಬುದ್ದಿ ಹೇಳಿದ್ದಾರೆ. ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು, ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.