ಕೂಗು ನಿಮ್ಮದು ಧ್ವನಿ ನಮ್ಮದು

ನಾಡಿನ ಜನತೆಗೆ ಸಿಎಂ ದಸರಾ ಶುಭಾಶಯ- ಪ್ರವಾಹ ಪೀಡಿತ 14 ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆ ಸಿಎಂ ಸಭೆ

ಮೈಸೂರು: ನಾಡಿನ ಎಲ್ಲ ಜನರಿಗೂ ದಸರಾ ಹಬ್ಬದ ಶುಭಾಶಯಗಳು. ಮೈಸೂರಿನಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ನಾಡಿನ ಜನತೆಗೆ ಶುಭಕೋರಿದ್ದಾರೆ.

ಇದೇ ವೇಳೆ ಮಾತನಾಡಿದ ಸಿಎಂ, ನಾಳೆ ಚಾಮುಂಡಿ ದರ್ಶನ ಮಾಡಿ, ಕಾರ್ಯಕ್ರಮ ಮುಗಿಸಿ 10 ಗಂಟೆಗೆ ವಾಪಸ್ ಬೆಂಗಳೂರಿಗೆ ಹೋಗುತ್ತೇನೆ. ಜನರ ಅಪೇಕ್ಷೆಯಂತೆ ಸರಳವಾಗಿ ದಸರಾ ಆಚರಣೆ ಮಾಡುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಜನರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಮೂಲಕ ಸಹಕಾರ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಉತ್ತರ ಕರ್ನಾಟಕ ಪ್ರವಾಹ ವಿಚಾರವಾಗಿ 14 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. 5-6 ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಪ್ರವಾಹ ಆಗಿದೆ. ಸಾವಿರಾರು ಮನೆಗಳು, ಅಪಾರ ಪ್ರಮಾಣದ ಬೆಳೆ ಹಾನಿ ಆಗಿದೆ. ಎಲ್ಲಾ ಡಿಸಿಗಳ ಹತ್ತಿರ ಹಣ ಇದೆ. ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸುತ್ತೇವೆ‌ ಎಂದಿರುವ ಮುಖ್ಯಮಂತ್ರಿಗಳು, ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಮಾತನಾಡಿದ್ದೇನೆ. ಅವರೂ ನೆರವು ನೀಡುವುದಾಗಿ ಹೇಳಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುತ್ತೇವೆ.

ಪ್ರವಾಹ ವೀಕ್ಷಣೆ ಪ್ರವಾಸ ಮಾಡುವ ಬಗ್ಗೆ ನಾಳೆ ಅಥವಾ ನಾಡಿದ್ದು ತೀರ್ಮಾನ ಮಾಡುತ್ತೇನೆ. ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಹೋಗಿದ್ದಾರೆ. ಗೋವಿಂದ ಕಾರಜೋಳ ಬೇರೆ ಬೇರೆ ಕಾರ್ಯಕ್ರಮಗಳ ಕಾರಣಕ್ಕೆ ಹೋಗಿಲ್ಲ. ಕಂದಾಯ ಸಚಿವರು ಹೋದರೆ ಎಲ್ಲರೂ ಹೋದಂತೆ. ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳುತ್ತೇವೆ. ರೈತ ಸಮುದಾಯಕ್ಕೂ ನಮ್ಮ ಮೇಲೆ ವಿಶ್ವಾಸವಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ ನೀಡಿ ಮನೆ ಕಟ್ಟಿಸಿ ಕೊಡುತ್ತೇವೆ. ತಕ್ಷಣವೇ 10 ಸಾವಿರ ರೂಪಾಯಿ ತಾತ್ಕಾಲಿಕ ಪರಿಹಾರ ಕೊಡುತ್ತೇವೆ. ಎನ್‌ಡಿಆರ್‌ಎಫ್‌ನಿಂದ ಕಡಿಮೆ ಹಣ ಬಂದರೂ ನಾವು ಮತ್ತಷ್ಟು ಹಣ ಹಾಕಿ ಮನೆ ಕಟ್ಟಿಸಿಕೊಡುತ್ತೇವೆ ಎಂದಿರುವ ಸಿಎಂ, ಪ್ರವಾಹ ನಷ್ಟದ ಅಂದಾಜು ಆಗಿಲ್ಲ. ಒಂದು ವಾರ ಬೇಕು‌ ಅಂತ ಜಿಲ್ಲಾಧಿಕಾರಿಗಳು ಕೇಳಿದ್ದಾರೆ‌. ಸಮಗ್ರ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ‌ ನೀಡಿದ್ದಾರೆ.

error: Content is protected !!