ಬೆಳಗಾವಿ: ಡಿ.ಕೆ.ಶಿವಕುಮಾರ್ ಕೂಡ ಸರಕಾರ ನಡೆಸಿದ್ದಾರೆ, ಅತಿ ಹತಾಶರಾಗಿ ಈ ಮಟ್ಟಿಗೆ ಮಾತಾನಾಡುವುದು ಸರಿಯಲ್ಲ ಎಂದು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮೇಲೆ ಪ್ರಕರಣ ದಾಖಲಿಸಿದ್ದಕ್ಕೆ ಬಿಜೆಪಿ ಸರ್ಕಾರದ ವಿರುದ್ದ ಕೆಂಡ ಕಾರಿದ್ದ ಡಿ.ಕೆ. ಶಿವಕುಮಾರ್ ಗೆ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಮುನಿರಾಜಗೌಡ ಅವರ ಕಾನೂನು ಹೋರಾಟ ವಯಕ್ತಿಕ. ಅದು ಪಕ್ಷದ್ದಲ್ಲ. ಈ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಹತಾಶರಾಗಿದ್ದಾರೆ ಅವರಿಗೆ ಉತ್ತರ ಕೊಡುವುದು ಸೂಕ್ತವಲ್ಲ ಎಂದ ಸಾಹುಕಾರ್, ಡಿ.ಕೆ.ಶಿವಕುಮಾರ್ ಸಿಬಿಐ ತನಿಖೆಯಿಂದ ಹತಾಶರಾದ್ರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ, ನಾ ಹೆಳೋದು ಬೇಡ ಎಂದರು. ಇನ್ನು ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ನಮ್ಮ ಗೆಲುವು ಖಂಡಿತ ಎಂದಿರುವ ಸಚಿವರು, ರಾಜರಾಜೇಶ್ವರಿ ನಗರದಲ್ಲಿ ನಮ್ಮ ಅಭ್ಯರ್ಥಿ ಮುನಿರತ್ನ 50 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಹದಾಯಿ ವಿಚಾರದಲ್ಲಿ ಗೋವಾಗೆ ಮುಖಭಂಗವಾಗೋದು ಶತಃಸಿದ್ದ. ಯಾಕಂದ್ರೆ ನಾವು ಟ್ರಿಬ್ಯುನಲ್ ಆದೇಶ ಮತ್ತು ಸುಪ್ರೀಂ ಆದೇಶವನ್ನು ಉಲ್ಲಂಘಿಸಿಲ್ಲ. ಸುಳ್ಳು ಅಫಿಡಿವಿಟ್ ಹಾಕಿರುವ ಗೋವಾ ಮುಖಭಂಗ ಅನುಭವಿಸಲಿದೆ ಎಂದು ಗೋವಾ ಸರ್ಕಾರದ ವಿರುದ್ದ ಹರಿಹಾಯ್ದರು. ಇನ್ನು ತಮ್ಮ ಸುಪುತ್ರ ಬೆಳಗಾವಿ ಲೋಕಸಭಾ ಉಪಚುನಾವಣೆ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಮಗ ಅಮರನಾಥ ಇನ್ನೂ ಚಿಕ್ಕವನು, ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡಲಿ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರ ಪರವಾಗಿ ಕೆಲಸ ಮಾಡ್ತೀವಿ ಎಂದರು.
ಉಳಿದಂತೆ ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣಾ ವಿಚಾರದಲ್ಲಿ ಈಗಾಗಲೇ ಹಲವು ಭಾರೀ ಹೇಳಿದ್ದೇನೆ. ಬಾಲಚಂದ್ರ ಜಾರಕಿಹೊಳಿ ಮತ್ತು ಉಮೇಶ ಕತ್ತಿಗೆ ನನ್ನ ಬೆಂಬಲವಿದೆ, ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಿದ್ದೇನೆ. ಅಲ್ಲದೇ ಅವರು ಚುನಾವಣೆಗೆ ನಿಲ್ಲಿಸುವ ಅಭ್ಯರ್ಥಿಗೆ ನನ್ನ ಬೆಂಬಲವಿದೆ ಎಂದ ಸಾಹುಕಾರ, ಸಹಕಾರ ರಂಗದಲ್ಲಿ ಪಕ್ಷ-ಜಾತಿ ಇಲ್ಲ ಎಂದಿದ್ದಾರೆ.