ಕೂಗು ನಿಮ್ಮದು ಧ್ವನಿ ನಮ್ಮದು

ಡಿಕೆಶಿ ಕೋಟೆಗೆ ಲಗ್ಗೆಯಿಟ್ಟ ಗೋಕಾಕ್ ಸಾಹುಕಾರ : ಅತೀ ಶೀಘ್ರ ಮೇಕೆದಾಟು ಯೋಜನೆಗೆ ಚಾಲನೆ

ರಾಮನಗರ: ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ರಾಜ್ಯದ ಮಹಾತ್ಮಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮೇಕೆದಾಟು ಅಣೆಕಟ್ಟು ನಿರ್ಮಾಣ ಸಂಬಂಧ ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿ ಜೊತೆಗೂಡಿ ಚರ್ಚಿಸಲಾಗುವುದು. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂಗಮ – ಮೇಕೆದಾಟು ಪ್ರದೇಶಕ್ಕೆ ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಇದರ ಡಿಪಿಆರ್ ಸಿದ್ಧವಾಗಿದ್ದು, ನಂತರ ನನೆಗುದಿಗೆ ಬಿದ್ದಿತ್ತು.

ಈಗ ಮತ್ತೊಮ್ಮೆ ಪರಿಷ್ಕೃತ ಪ್ರಸ್ತಾವ ಸಲ್ಲಿಸಲಾಗುವುದು ಹಾಗೂ ಮುಂದಿನ ವರ್ಷ ತಮಿಳುನಾಡಿನಲ್ಲಿ‌ ಚುನಾವಣೆ ಇದೆ. ಹೀಗಾಗಿ ನೆರೆಯ ರಾಜ್ಯದಿಂದ ಸಹಜವಾಗಿಯೇ ಇದಕ್ಕೆ ಅಡೆತಡೆ ಹೆಚ್ಚಿದೆ. ಅಗತ್ಯ ಬಿದ್ದರೆ ತಮಿಳುನಾಡು ಸರ್ಕಾರದ ಜೊತೆ ಮಾತುಕತೆ ನಡೆಸಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದ್ರು. ರಾಮನಗರ ಜಿಲ್ಲೆಯ ಮುಗ್ಗೂರು ಮತ್ತು ಹನೂರು ಅರಣ್ಯ ವಲಯದಲ್ಲಿರುವ ಒಂಟಿಗುಂಡುವಿನ ಬಳಿ ಮೇಕೆದಾಟು ಸಮಾನಾಂತರ ಅಣೆಕಟ್ಟು ನಿರ್ಮಾಣ ಮಾಡಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡಿದ ಕೂಡಲೇ ಯೋಜನೆ‌ ಪ್ರಾರಂಭಿಸಲಾಗುವುದು‌ ಎಂದು ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ‌ ಅವರು ತಿಳಿಸಿದರು.

ಮೇಕೆದಾಟು ಯೋಜನಾ ಪ್ರದೇಶಕ್ಕೆ‌ ಭೇಟಿ‌ ನೀಡಿ, ಸ್ಥಳ ಪರಿಶೀಲನೆ ಮಾಡಿದ ಸಚಿವರು, ಅಣೆಕಟ್ಟು ನಿರ್ಮಾಣ ಸಂಬಂಧ ಕೇಂದ್ರದ ಜಲಶಕ್ತಿ ಸಚಿವಾಲಯ ಈಗಾಗಲೇ ಅನುಮತಿ ನೀಡಿದ್ದು, ಪರಿಸರ ಮತ್ತು ಅರಣ್ಯ ಇಲಾಖೆಗಳ ಅನುಮತಿಗಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದರು. ಮೇಕೆದಾಟು ಅಣೆಕಟ್ಟನ್ನು 9000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ವಾಸ್ತವ ಅಂಶಗಳ ಮನವರಿಕೆಗಾಗಿ ಮತ್ತು ತ್ವರಿತ ಅನುಮೋದನೆಗೆ ಕೇಂದ್ರ ಸರ್ಕಾರದ ಮೇಲೆ‌ ಒತ್ತಡ ಹೇರುವ ದೃಷ್ಟಿಯಿಂದ ದೆಹಲಿಗೆ ತೆರಳುವುದಾಗಿ ಸಚಿವರು ಹೇಳಿದರು. ಸಚಿವ ರಮೇಶ್ ಜಾರಕಿಹೊಳಿ‌ ಅವರು ಪರಿವೀಕ್ಷಣೆ ನಡೆಸಿ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಎಂ ಎಲ್ ಸಿ ಸಿಪಿ ಯೋಗೇಶ್ವರ್, ಕಾವೇರಿ ನೀರಾವರಿ ನಿಗಮದ ಎಂಡಿ ಜೈಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!