ವಿಜಯಪುರ: ಮಕ್ಕಳು ನಮ್ಮ ಕಣ್ಣಮುಂದೆ ಸಾಯಬಾರದು. ನಮ್ಮ ಮಕ್ಕಳು ಸಮಾಜದಲ್ಲಿ ಉತ್ತಮ ಸ್ಥಾನಮಾನದಲ್ಲಿ ಬಾಳಿ ಬದುಕಬೇಕು ಎಂದು ಪ್ರತಿ ತಂದೆ-ತಾಯಿಯೂ ಆಸೆ ಪಡ್ತಾರೆ. ಆದ್ರೆ ಟಿವಿ ನೋಡುವ ವಿಚಾರವಾಗಿ ಮನೆಯಲ್ಲಿ ತಾಯಿ ಬುದ್ದಿ ಮಾತು ಹೇಳಿದ್ದಕ್ಕೆ ಕೋಪಗೊಂಡ ಮಗಳು ಹೆತ್ತ ತಾಯಿಯ ಎದುರೇ ಕಲ್ಲಿನ ಕ್ವಾರಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಬೇಡ ಮಗಳೇ ಬೇಡ ದುಡುಕಬೇಡ ಎಂದು ಹಿಂದೆ ತಾಯಿ ಬೆನ್ನತ್ತಿದ್ರೂ ಕಿವಿಗೆ ಹಾಕಿಕೊಳ್ಳದ ಮಗಳು ದುಡುಕಿನ ನಿರ್ಧಾರ ಮಾಡಿ, ಹೆತ್ತ ಕರುಳಿಗೆ ಸಂಕಟ ತಂದಿದ್ದಾಳೆ.
ತಾಯಿ ಕಣ್ಣೆದುರೇ ನೀರಿಗೆ ಹಾರಿದ ಮಗಳು. ಟಿವಿ ನೋಡಬೇಡ ಎಂಬ ಬುದ್ದಿ ಮಾತಿಗೆ ಪ್ರಾಣ ಕಳೆದುಕೊಂಡ ಯುವತಿ.. ಇಂತಹದ್ದೊಂದು ಮನ ಕಲಕುವ ಘಟನೆ ನಡೆದಿದ್ದು ವಿಜಯಪುರ ನಗರದ ಹೊರವಲಯದಲ್ಲಿರುವ ಗಾಂಧಿ ನಗರದಲ್ಲಿ. ಇಲ್ಲಿನ ನಿವಾಸಿ 17 ವರ್ಷದ ಯುವತಿ ಸ್ನೇಹಾ ನಂದಿ ಇಂತಹ ದುಡುಕಿನ ನಿರ್ಧಾರ ಕೈಗೊಂಡು ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಟಿವಿಯಲ್ಲಿ ಹಾಡು ಕೇಳುವ ವಿಚಾರಕ್ಕೆ ಮನೆಯಲ್ಲಿ ಜಗಳ ಶುರುವಾಗಿತ್ತು. ಈ ವೇಳೆ ತಾಯಿ, ಮಗಳಿಗೆ ಬುದ್ದಿವಾದ ಹೇಳುತ್ತಿರುವಾಗ ತಾಯಿಯೊಂದಿಗೆ ಜಗಳ ಮಾಡಿಕೊಂಡ ಮಗಳು ಸ್ನೇಹಾ ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಕೋಪದಲ್ಲಿ ಮನೆಯ ಹತ್ತಿರವಿದ್ದ ಕಲ್ಲಿನ ಕ್ವಾರಿಯತ್ತ ಓಡತೊಡಗಿದ್ದಾಳೆ.
ಈ ವೇಳೆ ಬೇಡ ಮಗಳೆ ನಿಲ್ಲು ಎಂದು ತಾಯಿ ಲಕ್ಷ್ಮೀ ಬೆನ್ನತ್ತಿದ್ರೂ ಮಾತು ಕೇಳದ ಮಗಳು ಸ್ನೇಹಾ ಮಳೆ ನೀರಿನಿಂದ ತುಂಬಿದ್ದ ಕಲ್ಲಿನ ಖಣಿಗೆ ಧುಮುಕಿ ಪ್ರಾಣ ಕಳೆದುಕೊಂಡಿದ್ದಾಳೆ. ಅಷ್ಟೊತ್ತಿಗೆ ತಾಯಿ ಲಕ್ಷ್ಮೀ ಓಡೋಡಿ ಬಂದು ಗಾಂಧಿ ನಗರದ ಜನರನ್ನು ಕರೆತಂದು ನೋಡುವಷ್ಟರಲ್ಲಿ ತಾಯಿಯ ಕಣ್ಮುಂದೆಯೇ ಮಗಳು ನೀರಲ್ಲಿ ಮುಳುಗಿಬಿಟ್ಟಿದ್ದಾಳೆ. ನಂತರ ವಿಷಯ ತಿಳಿದ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರ ಸಹಾಯದಿಂದ ಯುವತಿ ಸ್ನೇಹಾಳ ಶವವನ್ನು ಹೊರತೆಗೆದಿದ್ದಾರೆ.
ಶವಪರೀಕ್ಷೆ ಬಳಿಕ ವಿಧಿವಿಧಾನಗಳಂತೆ ಶವಸಂಸ್ಕಾರ ಮಾಡಲಾಗಿದೆ. ಮಗಳ ಒಂದು ದುಡುಕಿನ ನಿರ್ಧಾರದಿಂದಾಗಿ ಇಡಿ ಮನೆ ಇಂದು ಸ್ಮಶಾನ ಮೌನವಾಗಿದೆ. ಹರೆಯದ ಮಗಳಿಗೆ ಟಿವಿ ನೋಡಬೇಡ ಎಂದಿದ್ದೆ ದೊಡ್ಡ ತಪ್ಪು ಎನ್ನುವಂತಾಗಿದ್ದು, ಇದ್ದ ಒಬ್ಬಳೇ ಮಗಳು ಇಂದು ಇಲ್ಲವಾಗಿದ್ದಾಳೆ.