ಬೆಂಗಳೂರು: ಮೈಸೂರಿನ ಇದೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಮೈಸೂರಿನ ಗ್ರಾಮೀಣ ಪ್ರದೇಶದಲ್ಲಿ ಏನೋ ಕೆಲಸ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಕೆಲಸದ ಸ್ಥಳಕ್ಕೆ ಹೋಗುವಾಗ ಹಳ್ಳಿಯ ವ್ಯಕ್ತಿಯೊಬ್ಬ ಮಹಿಳೆಗೆ ಛತ್ರಿ ಹಿಡಿದು ನಿಂತಿದ್ದಾನೆ. ಇದಿಷ್ಟು ಆ ಫೋಟೊದಲ್ಲಿ ಮೇಲ್ನೋಟಕ್ಕೆ ಕಾಣುವ ಚಿತ್ರಣ. ಆದರೆ ಅಲ್ಲಿನ ಅಸಲಿ ಕಥೆಯೇ ಬೇರೆ ಇದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ ವೈದ್ಯರೊಬ್ಬರು ಅದನ್ನು ವಿವರವಾಗಿ, ವಿಸ್ತಾರವಾಗಿ ವಿವರಿಸಿದ್ದಾರೆ. ಹೌದು.. ಅರಮನೆ ನಗರಿ ಮೈಸೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹೊಸ ಅಗ್ರಹಾರ ಪಂಚಾಯತಿಯ ‘ಪಂಚಾಯತಿ ಅಭಿವೃದ್ಧಿ ಅಧಿಕಾರಿ’ಯ ಕಥೆ ಇದು. ಮೈಸೂರಿನ ಈ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಈ ಫೋಟೋ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವರೆಗೂ ತಲುಪಿದೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಶ್ನೆ ಮಾಡಿದ ವೈದ್ಯರೊಬ್ಬರು, ಪ್ರಧಾನಿ ನರೇಂದ್ರ ಮೋದಿಯವರಿಗೆ ಹೀಗೆ ಕೇಳಿದ್ದಾರೆ.
ಮಾನ್ಯ ನರೇಂದ್ರ ಮೋದಿ ಅವರೇ, ನೀವು ಇದನ್ನು ನಂಬಲಿಕ್ಕೂ ಸಾಧ್ಯವಿಲ್ಲ. ನೀವು ಯಾವಾಗಲೂ ದೇಶದ ಸೇವಕ ಎಂದು ಹೇಳುತ್ತಿರುತ್ತಿರಿ. ಆದರೆ ನಾವು ‘ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ’ ಕೆಲವು ಫೋಟೊಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಗಳು ನಡೆದುಕೊಳ್ಳುವಂತೆ ವರ್ತಿಸುತ್ತಿದ್ದಾರೆ ಈ ಅಧಿಕಾರಿಗಳು ಎಂದು ಫೋಟೋ ಅಪ್ಲೋಡ್ ಮಾಡಿ ವಿವರವಾಗಿ ಬರೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈದ್ಯ ಮಾಡಿದ ಈ ಟ್ವಿಟ್ ಗೆ ಸರಣಿ ಪ್ರತಿಕ್ರಿಯೆಗಳು ಬರುತ್ತಿವೆ. ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಟ್ಯಾಗ್ ಮಾಡಿ ಪ್ರಶ್ನೆ ಕೇಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೈಸೂರಿನ ಪಿಡಿಒ ಫೋಟೋ ಇದೀಗ ಫುಲ್ ವೈರಲ್ ಆಗಿದ್ದು, ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.