ಚಿಕ್ಕೋಡಿ: ಪಾತ್ರೆಗಾಗಿ ಬಲಿಯಾಯ್ತು ಬಡಜೀವ |ಕೃಷ್ಣಾ ನದಿ ದಾಟುವಾಗ ಅವಘಡ
ಪಾತ್ರೆಗಾಗಿ ಕೃಷ್ಣಾ ನದಿಗೆ ಬಡಜೀವವೊಂದು ಬಲಿಯಾಗಿದೆ. ಪಾತ್ರೆ ಪಗಡೆಗಳ ಬಗ್ಗೆ ಕೊರಗಿ ಕೃಷ್ಣಾ ನದಿಗೆ ಹಾರಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಪಾತ್ರೆ ತರಲು ನದಿ ದಾಟುವ ಸಾಹಸಕ್ಕೆ ಕೈ ಹಾಕಿದ್ದ ಸದಾಶಿವ ತಿಪ್ಪಣ್ಣ ಜಗದಾಳೆ (೬೦) ಮೃತ ದೇಹ ಪತ್ತೆಯಾಗಿದೆ. ಸದಾಶಿವ ಜಗದಾಳೆ ಚಿಂಚಲಿ ಪಟ್ಟಣದ ಮಸಾಲಜಿ ತೋಟದ ನಿವಾಸಿಯಾಗಿದ್ದು, ಇಂದು ಬೆಳಗ್ಗೆ ಪಾತ್ರೆ ತರಲು ನಡುಗಡ್ಡೆಯಾಗಿದ್ದ ತನ್ನ ತೋಟಕ್ಕೆ ತೆರಳಿದ್ದ. ನದಿಯ ಸುಳಿವಿಗೆ ಸಿಕ್ಕಿ ಕಾಣೆಯಾಗಿದ್ದ ಸದಾಶಿವ ಜಗದಾಳೆ, ಸತತ ೫ ಗಂಟೆಯ ಕಾರ್ಯಾಚರಣೆಯ ನಂತರ ಶವವಾಗಿ ಪತ್ತೆಯಾಗಿದ್ದಾನೆ. ಸದಾಶಿವ ಮೃತ ದೇಹ ಸಿಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.