ಕೂಗು ನಿಮ್ಮದು ಧ್ವನಿ ನಮ್ಮದು

ಚಿಕ್ಕೋಡಿ: ಕೃಷ್ಣೆಯ ಅಬ್ಬರಕ್ಕೆ ಮತ್ತಷ್ಟು ಕಹಿಯಾದ ಕಬ್ಬು ಬೆಳೆಗಾರರ ಬದುಕು

ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆ ಅಕ್ಷರಶಃ ಕರ್ನಾಟಕದ ಅನ್ನದಾತನ ಪಾಲಿಗೆ ಜವರಾಯನಂತೆ ಎರಗಿ ಬಂದಿದೆ. ದೇಶದ ಬೆನ್ನೆಲುಬು ಅಂತ ಕರೆಯುವ ಅನ್ನದಾತ ಸದ್ಯ ಮಳೆರಾಯನ ಪ್ರಕೋಪಕ್ಕೆ ಸಿಲುಕಿ ಕಂಗಾಲಾಗುವ ಸ್ಥಿತಿ ಎದುರಾಗಿದೆ. ಕಳೆದ ವರ್ಷವಷ್ಟೇ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ ನಡುವೆ ಬಾಕಿ ಹಣಕ್ಕಾಗಿ ರೈತರು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲದೇ ಕೆಲ ತಿಂಗಳ ಹಿಂದೆ ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿ ತಮ್ಮ ಬೆಳೆಗಳಿಗೆ ನೀರಿಲ್ಲದೆ ಅವು ತಮ್ಮ ಕಣ್ಣ ಮುಂದೆಯೇ ಕಮರಿ ಹೋದಾಗ ಬರದ ಬರೆಯನ್ನ ನುಂಗಿ, ಇನ್ನು ಮುಂದಾದರು ಬದುಕು ಹಸನಾಗುವ ಕನಸು ಕಂಡಿದ್ದ ರೈತರು ಈಗ ಎದುರಾದ ವಿಧಿಯಾಟಕ್ಕೆ ಮತ್ತಷ್ಟು ನಲುಗಿ ಹೋಗಿದ್ದಾರೆ. ಚಿಕ್ಕೋಡಿ, ರಾಯಭಾಗ, ಅಥಣಿ, ಕಾಗವಾಡ, ನಿಪ್ಪಾಣಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ನಿಗದಿತ ಪ್ರಮಾಣದ ಮಳೆ ಆಗದಿದ್ದರೂ ಕೂಡ ಮಹಾರಾಷ್ಟ್ರದಲ್ಲಿ ಚಂಡಿ ಹಿಡಿದ ಮಳೆ ಸದ್ಯ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ನಿರ್ಮಿಸಿದೆ. ಇದರಿಂದಾಗಿ ಕಬ್ಬು, ಸೋಯಾ, ಅವರೆ, ಸೂರ್ಯಕಾಂತಿ, ನೆಲಗಡಲೆ, ಹೆಸರು ಮತ್ತು ಅವರೆ, ಅರಿಶಿಣ ಬೆಳೆದ ರೈತರ ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಒಂದು ಎಕರೆ ಕಬ್ಬು ಬೆಳೆಗೆ ಕನಿಷ್ಠ ಒಂದುವರೆ ಲಕ್ಷದಷ್ಟು ಪರಿಹಾರ ಕೊಟ್ಟರಷ್ಟೇ ರೈತರು ಬದುಕಲು ಸಾಧ್ಯ ಇಲ್ಲದಿದ್ದರೆ ಕಬ್ಬು ಬೆಳೆದ ರೈತರ ಬದುಕು ಮತ್ತಷ್ಟು ಕಹಿಯಾಗಲಿದೆ ಎನ್ನುತ್ತಾರೆ ಇಲ್ಲಿನ ರೈತರು. ಹೀಗಾಗಿ ರೈತರು ಅತ್ತ ಹೈನುಗಾರಿಕೆಯೂ ಇಲ್ಲ ಇತ್ತ ಫಸಲೂ ಇಲ್ಲದೆ ತಮ್ಮ ಪಾಲಿಗೆ ಜವರಾಯನಂತೆ ಎರಗಿಬಂದ ಮಳೆರಾಯನಿಗೆ ಹಿಡಿಶಾಪ ಹಾಕುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
error: Content is protected !!