ಬೆಳಗಾವಿ: ಕಳೆದ ಸುಮಾರು 2 ತಿಂಗಳಿನಿಂದಲೂ ಕೊರೆನಾ ವಿರುದ್ಧ ಹಗಲು, ರಾತ್ರಿಯೆನ್ನದೆ ಸೇವೆಸಲ್ಲಿಸುತ್ತಿರುವ ಕೊರೋನಾ ವಾರಿಯರ್ಸ್ ಗಳನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದರು. ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಸಾಂಬ್ರಾ ಗ್ರಾಮದಲ್ಲಿ ಸಂಘಟಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೊರೊನಾ ಅಟ್ಟಹಾಸದಿಂದ ಜನರನ್ನು ಯಶಸ್ವಿಯಾಗಿ ರಕ್ಷಿಸಿಸುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಎಲ್ಲ ಇಲಾಖೆಯ ಕೊರೊನಾ ವಾರಿಯರ್ಸ್ ಗಳನ್ನು ಹೆಬ್ಬಾಳಕರ್ ಸನ್ಮಾನಿಸಿದರು. ಅವರ ಸೇವೆಯನ್ನು ಕೊಂಡಾಡಿದ ಲಕ್ಷ್ಮಿ ಹೆಬ್ಬಾಳಕರ್, ನಿಮ್ಮೆಲ್ಲರ ಸೇವೆ ಅಮೋಘವಾಗಿದ್ದು, ತಮ್ಮ ಜೀವಗಳನ್ನು ಲೆಕ್ಕಿಸದೇ ಅವಿರತ ಸೇವೆ ಸಲ್ಲಿಸುತ್ತಿದ್ದೀರಿ. ಇಡೀ ಸಮಾಜದ ಮೇಲೆ ನಿಮ್ಮ ಋಣವಿದೆ ಎಂದು ಹೇಳಿದರು. ಕೊರೋನಾ ಸಂಕಷ್ಟದಿಂದ ಪಾರಾಗಲು ಜನರು ಮನೆಯಿಂದ ಹೊರಗೆ ಬರದೆ ಎಚ್ಚರಿಕೆಯಿಂದರಬೇಕು. ಜನರು ಕುಟುಂಬದೊಂದಿಗೆ ಕಳೆಯಲು ಇದೊಂದು ಅವಕಾಶ ಎಂದು ತಿಳಿಯಬೇಕು. ಆದರೆ ಕೊರೋನಾ ವಾರಿಯರ್ಸ್ ಗಳಾದ ನರ್ಸ್ ಗಳು, ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಅಗ್ನಿ ಶಾಮಕ ಸಿಬ್ಬಂದಿ ಮೊದಲಾದವರು ಮನೆಯಲ್ಲಿರಲು ಸಾಧ್ಯವಿಲ್ಲ. ಕುಟುಂಬವನ್ನೂ ಮರೆತು ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದೀರಿ. ನಿಮ್ಮ ಸೇವೆಯನ್ನು ಎಷ್ಟು ಪ್ರಶಂಸಿಸಿದರೂ ಕಡಿಮೆಯೇ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಇದ್ದರು.