ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ದಿ.ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ನಗರದ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿ ಇರುವ ಸುರೇಶ್ ಅಂಗಡಿ ಅವರ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ದಿ.ಸುರೇಶ್ ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು. ನಂತರ ಕುಟುಂಬದ ಸದಸ್ಯರ ಜತೆ ಮಾತನಾಡಿದ ಅವರು, ದಿ.ಸುರೇಶ್ ಅಂಗಡಿ ಅವರ ಸಜ್ಜನಿಕೆಯ ನಡವಳಿಕೆಯನ್ನು ಸ್ಮರಿಸಿದರು. ದಿ.ಸುರೇಶ್ ಅಂಗಡಿ ಅವರ ತಾಯಿ ಸೋಮವ್ವ ಅವರ ಕೈಹಿಡಿದು ಕೆಲಹೊತ್ತು ಭಾವುಕರಾದ ಮುಖ್ಯಮಂತ್ರಿಗಳು, ಧೈರ್ಯದಿಂದ ಇರುವಂತೆ ತಿಳಿಸಿದರು. ದೇವರು ಈ ರೀತಿ ಅನ್ಯಾಯ ಮಾಡಬಾರದಿತ್ತು ಎಂದು ದುಃಖ ವ್ಯಕ್ತಪಡಿಸಿದ ಅವರು, ಸುರೇಶ್ ಅಂಗಡಿ ಅವರು ಆಸ್ಪತ್ರೆಯಲ್ಲಿ ಇದ್ದಾಗ ಆರೋಗ್ಯವಾಗಿ ಇದ್ದೀನಿ ಎಂದು ತಿಳಿಸಿದ್ದನ್ನು ನೆನಪಿಸಿಕೊಂಡರು. ಪತ್ನಿ ಮಂಗಲಾ ಸುರೇಶ್ ಅಂಗಡಿ, ಮಕ್ಕಳಾದ ಶ್ರದ್ಧಾ ಹಾಗೂ ಸ್ಫೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಸಿಎಂಗೆ ಸಚಿವರಾದ ರಮೇಶ್ ಜಾರಕಿಹೊಳಿ, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಶಾಸಕ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು