ಬೆಳಗಾವಿ: ಬೆಳಗಾವಿ ಸ್ಮಾರ್ಟ್ ಸಿಟಿ ಕಮಾಂಡ್ ಕಂಟ್ರೋಲ್ ಉದ್ಘಾಟನೆ ಬಳಿಕ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ರು. ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ನಾಳೆ ನಾನು ದೆಹಲಿಗೆ ಹೊರಟಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪ್ರಮುಖರೊಂದಿಗೆ ಚರ್ಚಿಸುತ್ತೇನೆ. ಎರಡು ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂದ ಸಿಎಂ, ಮಾಧ್ಯಮಗಳಲ್ಲಿ ಬರುತ್ತಿರೋದೆಲ್ಲ ಊಹಾಪೋಹ. ಉಪ ಚುನಾವಣೆಯಲ್ಲಿ ಬೆಳಗಾವಿಯಿಂದ ಗೆದ್ದ ಎಲ್ಲರೂ ಮಂತ್ರಿಯಾಗ್ತಾರೆ, ಉಮೇಶ ಕತ್ತಿ ಕೂಡ ಮಂತ್ರಿಯಾಗ್ತಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅಭಯ ನೀಡಿದರು. ಉಪಚುನಾವಣೆಯಲ್ಲಿ ಗೆದ್ದ ಎಲ್ಲರೂ ಮಂತ್ರಿಯಾಗ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಎರಡು ದಿನಗಳ ಬಳಿಕ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದ್ರು. ಇನ್ನು ಸಚಿವ ಸಂಪುಟದಿಂದ ಯಾರನ್ನಾದರೂ ಕೈ ಬಿಡಲಾಗುತ್ತಾ ಎಂಬ ಪ್ರಶ್ನೆಗೆ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿದ ಬಳಿಕ ಎಲ್ಲವು ತೀರ್ಮಾನವಾಗುತ್ತೆ ಎಂದು ಕುತೂಹಲ ಮೂಡಿಸಿದ್ರು. ಅಲ್ಲದೇ ಲಕ್ಷ್ಮಣ ಸವದಿ ಎಂ.ಎಲ್.ಸಿ ಯಾಗಿ, ಡಿಸಿಎಂ ಆಗಿ ಮುಂದುವರಿತಾರಾ ಎಂಬ ಪ್ರಶ್ನೆಗೆ, ಯಾರು ಇಲ್ಲ ಅಂತ ಹೇಳಿದ್ದು ಎಂದು ಮಾಧ್ಯಮದವರನ್ನು ಮರು ಪ್ರಶ್ನಿಸಿದರು.