ಕೂಗು ನಿಮ್ಮದು ಧ್ವನಿ ನಮ್ಮದು

ಎಚ್ಚರ.. ಎಚ್ಚರ.. ನೀವು ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ಇಂಥ ಆಸಾಮಿ ನಿಮಗೂ ಸಿಗಬಹುದು ಹುಷಾರ್..!

ಹಾಸನ: ಎಟಿಎಂ ಕಾರ್ಡ್ ಎಕ್ಸೇಂಜ್ ಮಾಡಿ, ಹಣ ಡ್ರಾ ಮಾಡಿಕೊಡೋ ನೆಪದಲ್ಲಿ ಪಂಗನಾಮ ಹಾಕುತ್ತಿದ್ದ
ಐನಾತಿ ಕಳ್ಳನನ್ನು ಹಾಸನದ ವಿಶೇಷ ತಂಡದ ಪೊಲೀಸರು ಬಂಧಿಸಿದ್ದಾರೆ. ಹಾಸನ ಹಾಗೂ ಇತರೆ ಜಿಲ್ಲೆಗಳಲ್ಲಿ ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಬರುತ್ತಿದ್ದ ಅಮಾಯಕರನ್ನು ವಂಚಿಸಿ ಹಣ ದೋಚುತ್ತಿದ್ದ ಆರೋಪಿ ಕಡೆಗೂ ಸಿಕ್ಕಿ ಬಿದ್ದಿದ್ದಾನೆ. ಅರಸೀಕೆರೆ ತಾಲೂಕು ಗಂಡಸಿ ಹೋಬಳಿ, ರಂಗೇನಹಳ್ಳಿ ಗ್ರಾಮದ ಆನಂದ್ ಅಲಿಯಾಸ್ ವಸಂತ್(35) ಬಂಧಿತ ಆರೋಪಿ. ಈತ ಒಂದಲ್ಲ, ಎರಡಲ್ಲ ಬರೋಬ್ಬರಿ 9 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆರೋಪಿಯಿಂದ 1.80 ಲಕ್ಷ ರೂಪಾಯಿ ನಗದು,1 ಕಾರು ಮತ್ತು 4 ಎಟಿಎಂ ಕಾರ್ಡ್ ವಶ ಪಡಿಸಿಕೊಳ್ಳಲಾಗಿದೆ.

ಯಾಮಾರಿಸಿ ಪಂಗನಾಮ ಹಾಕುವ ಎಕ್ಸ್ ಕ್ಲೂಸಿವ್ ಸಿಸಿಟಿವಿ ದೃಶ್ಯ

ಹಾಸನ ಜಿಲ್ಲೆಯಲ್ಲಿ ಎಟಿಎಂ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿವೆ. ಇದೀಗ ಬರೋಬ್ಬರಿ 9 ಎಟಿಎಂ ಗಳಲ್ಲಿ ಅಮಾಯಕರನ್ನು ವಂಚಿಸಿ ದೋಖಾ ಮಾಡಿದ್ದ ಐನಾತಿ ಕಳ್ಳ ಕಡೆಗೂ ಅಂದರ್ ಆಗಿದ್ದಾನೆ. ಕಳೆದ ಅಕ್ಟೋಬರ್ 3 ರಂದು ಕಟ್ಟಾಯ ಹೋಬಳಿ ಕಲ್ಲಹಳ್ಳಿ ಗ್ರಾಮದ ಹುಚ್ಚೇಗೌಡ ಎಂಬುವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಸೆಪ್ಟೆಂಬರ್ 4 ರಂದು ನಗರದ ಸಂತೆಪೇಟೆಯಲ್ಲಿರುವ ಹೆಚ್ಡಿಎಫ್ಸಿ ಬ್ಯಾಂಕ್ ಎಟಿಎಂ ನಲ್ಲಿ ನಾನು ಹಣ ಡ್ರಾ ಮಾಡಲು ಹೋಗಿದ್ದೆ. ಅದೇ ವೇಳೆಗೆ ಎಂಟ್ರಿಕೊಟ್ಟ ಅಪರಿಚಿತ, ನಾನು ನಿಮಗೆ ಹಣ ಡ್ರಾ ಮಾಡಿಕೊಡುತ್ತೇನೆ ಎಂದು ಹೇಳಿ ನನ್ನ ಎಟಿಎಂ, ಜೊತೆಗೆ ಪಿನ್ ನಂಬರ್ ಪಡೆದು 7 ಸಾವಿರ ತೆಗೆದುಕೊಟ್ಟ. ಈ ವೇಳೆ ಮೊದಲೇ ಬದಲೀ ಎಟಿಎಂ ಜೊತೆಯಲ್ಲಿ ತಂದಿದ್ದ ಅಪರಿಚಿತ, ಅದನ್ನು ಹುಚ್ಚೇಗೌಡರ ಕೈಗಿತ್ತು. ಅವರ ಅಸಲೀ ಎಟಿಎಂ ಕಿಸೆಗಿಳಿಸಿ ಅಲ್ಲಿಂದ ಕಾಲ್ಕಿತ್ತಿದ್ದ.

ಅದಾದ ಬಳಿಕ ಹುಚ್ಚೇಗೌಡಗೆ ಮತ್ತೆ ಹಣದ ಅಗತ್ಯ ಇದ್ದುದರಿಂದ ಎಟಿಎಂಗೆ ಹೋದಾಗ ಕಾರ್ಡ್ ಬದಲಾಗಿದ್ದರಿಂದ ಹಣ ಡ್ರಾ ಮಾಡಲು ಆಗಲಿಲ್ಲ. ಕೂಡಲೇ ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ ತಮ್ಮ ಖಾತೆಯಿಂದ 23 ಸಾವಿರ ಹಣ ಡ್ರಾ ಆಗಿರುವುದು ಪತ್ತೆಯಾಯಿತು. ಸೆಪ್ಟೆಂಬರ್4 ರಂದು ಹಣ ಡ್ರಾ ಮಾಡಿಕೊಡುವುದಾಗಿ ಬಂದಿದ್ದ ಅನಾಮಿಕ ನನಗೆ ಮೋಸ ಮಾಡಿದ್ದಾನೆ. ಕೂಡಲೇ ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಹುಚ್ಚೇಗೌಡ ದೂರಿನಲ್ಲಿ ತಿಳಿಸಿದ್ದರು. ಜಿಲ್ಲೆಯಲ್ಲಿ ಇದೇ ರೀತಿಯ ಪ್ರಕರಣ ಆಗಾಗ ನಡೆಯುತ್ತಿರುವುದರಿಂದ ಇದರ ಗಂಭೀರತೆ ಅರಿತು, ವಿಶೇಷ ತಂಡ ರಚನೆ ಮಾಡಲಾಗಿತ್ತು. ತನಿಖೆ ಕೈಗೊಂಡ ತಂಡ, ಅಕ್ಟೋಬರ್ 13 ರಂದು ಸಂಜೆ 5 ಗಂಟೆ ಸಮಯದಲ್ಲಿ ನಗರದ ಕರ್ನಾಟಕ ಬ್ಯಾಂಕ್ ಎಟಿಎಂ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆಸಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತನೇ ಖದೀಮ ಎಂಬುದು ಬಯಲಾಗಿದೆ. ಬಂಧಿತನನ್ನು ತೀವ್ರ ವಿಚಾರಣೆಗೆ ಒಳ ಪಡಿಸಿದ ನಂತರ ಈತ ಜಿಲ್ಲೆ ಹಾಗೂ ವಿವಿಧೆಡೆ ಬರೋಬ್ಬರಿ 9 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಗಂಡಸಿಯಲ್ಲಿ 1, ದುದ್ದ 3, ಅರಸೀಕೆರೆ 2, ತಿಪಟೂರು 1, ಹಾಸನ 2 ಕಡೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಗಳಿಗೆ ಎಂಟ್ರಿ ಕೊಟ್ಟು ಹಣ ಗುಳುಂ ಮಾಡುತ್ತಿದ್ದ. ಈವರೆಗೆ ಆರೋಪಿ ಸುಮಾರು 3.92 ಲಕ್ಷ ರೂ. ಡ್ರಾ ಮಾಡಿದ್ದು, ಈ ಪೈಕಿ 1.80 ಲಕ್ಷ ರೂ. ಹಣವನ್ನು ರಿಕವರಿ ಮಾಡಲಾಗಿದೆ.

ಆನಂದ್ ಎಷ್ಟೊಂದು ಚಾಲಾಕಿ ಎಂದರೆ ತಾನು ಎಲ್ಲಿ ಹಣ ಗುಳುಂ ಮಾಡಬೇಕು ಎಂಬುದನ್ನು ಮೊದಲೇ ಫಿಕ್ಸ್ ಮಾಡಿಕೊಳ್ಳುತ್ತಿದ್ದ. ಅಮಾಯಕರನ್ನೇ ಹೊಂಚು ಹಾಕಿ ಕಾಯುತ್ತಿದ್ದ ಈತ, ಅದರಲ್ಲೂ ಗ್ರಾಮೀಣ ಭಾಗದವರು ಎಟಿಎಂ ಒಳಗ್ಗೆ ಎಂಟ್ರಿಕೊಟ್ಟ ಕೂಡಲೇ ಕ್ಯಾಪ್, ಹೆಲ್ಮೆಟ್ ಇಲ್ಲವೇ ಮಾಸ್ಕ್ ಧರಿಸಿ ಒಳ ಪ್ರವೇಶ ಮಾಡುತ್ತಿದ್ದ. ಗ್ರಾಹಕರು ಕೊಂಚ ನಿಧಾನ ಮಾಡುತ್ತಿದ್ದಂತೆಯೇ ಕೊಡಿ ನಾನು ಹಣ ಡ್ರಾ ಮಾಡಿಕೊಡುವೆ ಎಂದು ನಾಟಕವಾಡಿ ನಂತರ ತಾನು ಬಂದ ಉದ್ದೇಶ ಈಡೇರಿದ ಬಳಿಕ ಅಲ್ಲಿಂದ ಪರಾರಿಯಾಗುತ್ತಿದ್ದ. ಒಬ್ಬರಿಂದ ಪಡೆದ ಎಟಿಎಂ ನಿಂದ ಹಣ ಡ್ರಾ ಮಾಡಿದ ನಂತರ ಅದನ್ನು ಬೇರೊಬ್ಬರಿಗೆ ನೀಡಿ ತನ್ನ ದುರುದ್ದೇಶ ಈಡೇರಿಸಿಕೊಳ್ಳುತ್ತಿದ್ದ. ಈ ಪ್ರಕರಣಗಳಲ್ಲದೇ ಆರೋಪಿ ಹುಬ್ಬಳ್ಳಿಯಲ್ಲಿ ಒಂದು ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ ಎನ್ನಲಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಹಾಸನ ಎಸ್ಪಿ ತಿಳಿಸಿದ್ದಾರೆ. ಇಂಥ ಕಳ್ಳರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಯಾರಿಗಾದರೂ ಹಣ ಡ್ರಾ ಮಾಡಲು ಗೊತ್ತಿಲ್ಲದೇ ಇದ್ದರೆ ಪರಿಚಿತರು ಇಲ್ಲವೇ ಸಂಬಂಧಿಕರನ್ನು ಜೊತೆಗೆ ಕರೆದುಕೊಂಡು ಬರುವಂತೆ ಎಸ್ಪಿ ಶ್ರೀನಿವಾಸ್ ಗೌಡ ಮನವಿ ಮಾಡಿದ್ದಾರೆ.

error: Content is protected !!