ಕೂಗು ನಿಮ್ಮದು ಧ್ವನಿ ನಮ್ಮದು

ಅವರಿದ್ದರೆನೇ ನಾವೆಲ್ಲ! ವನ್ಯಜೀವಿಗಳನ್ನು ರಕ್ಷಿಸಿ: ಶಾಸಕಿ ಡಾ.ಅಂಜಲಿ ನಿಂಬಾಳಕರ ಕರೆ

ಬೆಳಗಾವಿ: 66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ರಾಜ್ಯ ಅರಣ್ಯ ಇಲಾಖೆ ಏರ್ಪಡಿಸಿರುವ Save Elephant Corridor ಸೈಕಲ್ ರ್ಯಾಲಿಗೆ ಬೆಳಗಾವಿ ಅರಣ್ಯ ವಿಭಾಗದ ಹೆಮ್ಮಡಗಾದಲ್ಲಿ ಶಾಸಕಿ ಡಾ.ಅಂಜಲಿ ನಿಂಬಾಳಕರ ಚಾಲನೆ ನೀಡಿದರು. ಇಂದು ವನ್ಯಜೀವಿಗಳ ಸಹಜ ಜೀವನಕ್ಕೆ ಮಾನವರಿಂದ ಹಲವು ಬಗೆಯ ತೊಂದರೆಗಳಾಗುತ್ತಿವೆ. ಕೆಲವು ಬಾರಿ ಅಜ್ಞಾನದಿಂದ, ಕೆಲವು ಬಾರಿ ನಮ್ಮ ಕುಹಕ ನಡುವಳಿಕೆಯಿಂದ ಮಗದೊಮ್ಮೆ ಮಾನವ ಅವಶ್ಯಕತೆಗಳ ಕಾರಣ ಅರಣ್ಯ ಮತ್ತು ವನ್ಯ ಜೀವಿಗಳ ವಾತಾವರಣಕ್ಕೆ ಧಕ್ಜೆ ಆಗುತ್ತಿದೆ ಎಂದು ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳಕರ ಖೇದ ವ್ಯಕ್ತಪಡಿಸಿದರು‌. ಬೆಳಗಾವಿ ಜಿಲ್ಲೆಯಲ್ಲಿ ಸಮೃದ್ಧ ಅರಣ್ಯ ಮತ್ತು ವನ್ಯ ಸಂಪತ್ತು ಇರುವುದು ನಮ್ಮೆಲ್ಲರ ಅದೃಷ್ಟ. ಕಾಡು ಮತ್ತು ವನ್ಯಜೀವಿಗಳಿಂದಲೇ (Their present, Our future) ನಾವೆಲ್ಲ ಎಂಬುವುದನ್ನು ಮರೆಯಬಾರದು ಎಂದು ಜನತೆಗೆ ಕರೆ ನೀಡಿದರು.


ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ವಿ.ಪಾಟೀಲ ಮಾತನಾಡಿ ದೈತ್ಯ ದೇಹದ ಸಾಧುಪ್ರಾಣಿ ಆನೆ ನಮ್ಮ ಪುಟ್ಟ ಮಕ್ಕಳಿಂದ ವೃದ್ದರವರೆಗೆ ಎಲ್ಲರಿಗೂ ಅಚ್ಚುಮೆಚ್ಚಿನ ಪ್ರಾಣಿ. ಆನೆ ಆವಾಸ (Elephant Corridor) ಗಳುದ್ದಕ್ಕೂ ಇಂದು ಮಾನವನಿಂದ ಹಲವು ಬಗೆಯ ತೊಂದರೆಯನ್ನು ಆನೆಗಳು ಅನುಭವಿಸುತ್ತಿವೆ. ಹದ್ದಿನಂತಹ ದೈತ್ಯ ಪಕ್ಷಿಗಳು ಸಹ ಇಂದು ಸಾಕಷ್ಟು ಸಂಖ್ಯೆಯಲ್ಲಿ ಕಣ್ಣಿಗೆ ಕಾಣಿಸುತ್ತಿಲ್ಲ. ಲಕ್ಷಾಂತರ ಉಪಯುಕ್ತ ಪ್ರಾಣಿ-ಪ್ರಬೇದಗಳಿಂದಲೇ ನೈಸರ್ಗಿಕ ಸಮತೋಲನವಾಗುತ್ತದೆ ಎಂಬುವುದು ಪರಿಸರಿಕ ವಿಜ್ಞಾನವೇ ನಮಗೆ ನೀಡುವ ತಿಳಿವಳಿಕೆ. ಆದರೆ ಇಂದು ನಾವೆಲ್ಲ ಅಮಿತ ತಿಳುವಳಿಕೆ ಹೊಂದಿದ್ದರೂ ನಿಸರ್ಗಕ್ಕೆ ನಮ್ಮ ಸೂಕ್ತ ಸಹಕಾರ ಕೊಡಲಾಗುತ್ತಿಲ್ಲ ಎಂದು ಮಾರ್ಮಿಕ ಬೇಸರ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ಭೀಮಗಡ ವನ್ಯಧಾಮದ ಹೆಮ್ಮಡಗಾದಿಂದ ಚಿಕ್ಕಮಂಗಳೂರಿನ ಮುತ್ತೋಡಿವರೆಗೆ ಸುಮಾರು 400 ಕಿಮೀ 50 ಸೈಕ್ಲಿಸ್ಟಗಳ ತಂಡ ಆನೆಗಳ ಬಗ್ಗೆ ತಿಳಿವಳಿಕೆ ನೀಡುತ್ತ ರ್ಯಾಲಿ ಹೊರಟಿತು. ಬೆಳಗಾವಿ ಡಿಸಿಎಫ್ ಎಂ.ವಿ. ಅಮರನಾಥ, ಗೋಕಾಕ ಡಿಸಿಎಫ್ ಎಸ್.ಜೆ. ಚಂದ್ರಶೇಖರ್, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಶಂಕರ ಕಲ್ಲೋಳಕರ, ಎಸಿಎಫ್ ಗಳಾದ ಸಿ.ಜಿ.ಮಿರ್ಜಿ, ಎಂ.ಬಿ.ಕುಸನಾಳ, ಜಿ.ಆರ್.ಶಶಿಧರ, ಎಸ್.ಎಂ.ಸಂಗೊಳ್ಳಿ, ಎಂ.ಕೆ.ಪಾತ್ರೋಟ ಹಾಗೂ ಬೆಳಗಾವಿ-ಗೋಕಾಕ ವಿಭಾಗದ ಅರಣ್ಯಾಧಿಕಾರಿಗಳು ಭಾಗವಹಿಸಿದರು.

ವರದಿ: ಪುರುಷೋತ್ತಮ್

error: Content is protected !!